ಗದಗ: ದಾರಿ ಬಿಡಿ ಎಂದು ಹಾರ್ನ್ ಮಾಡಿದ್ದಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಕಾರಿನಲ್ಲಿದ್ದ ಯುವಕರು ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಗದಗ ನಗರದ ಹೊರವಲಯ ಅಸುಂಡಿಯಲ್ಲಿ ನಡೆದಿದೆ.
ಗದಗದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯ ಬಸ್ ಅಸುಂಡಿ ಬಳಿ ಬರುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರಿಗೆ ಸೈಡ್ ಬಿಡುವಂತೆ ಚಾಲಕ ಸಂತೋಷ್ ಹಾರ್ನ್ ಮಾಡಿದ್ದಾರೆ. ಅದಕ್ಕೆ ಕಾರಣ ಕಾರಿನ ಸೈಡ್ ವ್ಯೂ ಮಿರರ್‌ಗಳನ್ನು ಒಳಭಾಗಕ್ಕೆ ಎಳೆದುಕೊಂಡು ಮುಚ್ಚಿದ್ದರಿಂದ ಕಾರಿನಲ್ಲಿದ್ದವರಿಗೆ ಹಿಂದೆ ಬರುತ್ತಿದ್ದ ವಾಹನ ಕಾಣುವುದು ಸಾಧ್ಯವಿರಲಿಲ್ಲ.
ಹಾಗಾಗೇ ಬಸ್ ಚಾಲಕ ಹಾರ್ನ್ ಮಾಡಿದ್ದಾರೆ. ಹಾರ್ನ್ ಶಬ್ದದಿಂದ ಕುಪಿತಗೊಂಡ ಕಾರಲ್ಲಿದ್ದವರು ಕಾರನ್ನು ಬಸ್‌ಗೆ ಅಡ್ಡಮಾಡಿ ನಿಲ್ಲಿಸಿ ಕಾರಿನಿಂದ ಇಳಿದು ಬಂದು ಬಸ್ ಡ್ರೈವರ್‌ಗೆ ಬಾಯಿಗೆ ಬಂದಂತೆ ಬೈದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಇನ್ನು ಚಾಲಕನಿಗೆ ಕಿಡಿಗೇಡಿಗಳು ಏನಾದರೂ ತೊಂದರೆ ಮಾಡಿಬಿಟ್ಟಾರು ಎಂದು ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರು ಚಾಲಕನ ರಕ್ಷಣೆಗೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಕಾರಿನಿಂದ ಇಳಿದು ಬಂದ ಕಿಡಿಗೇಡಿಕಗಳು ಚಾಲಕ ಸಂತೋಷ್ ಅವರಿಗೆ ಹೊಡೆದಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಕರ್ತವ್ಯನಿರತ ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಅವರ ಮುಖ ಪರಿಚಯ ವಿಡಿಯೋದಲ್ಲಿ ಸಿಗುತ್ತದೆ ಮತ್ತು ಕಾರಿನ ನಂಬರ್ ರಸ್ತೆಬದಿಯ ಯಾವುದಾದರೂ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಬಸ್‌ನಲ್ಲಿದ್ದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಟ್ಟಾರೆ ಸಾರಿಗೆ ಬಸ್ ಚಾಲನಾ ಸಿಬ್ಬಂದಿ ಒಂದು ರೀತಿ ಗರಗಸದ ಬಾಯಲ್ಲಿ ಸಿಕ್ಕಿಹಾಕಿಕೊಂಡವರಂತೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿ ಈ ಬಗ್ಗೆ ಸಾರಿಗೆ ಸಚಿವರು ಮತ್ತು ನಿಗಮದ ಎಂಡಿಗಳು ಗಮನಹರಿಸಿ ನೌಕರರಿಗೆ ಆಗುತ್ತಿರುವ ಈ ರೀತಿಯ ಸಮಸ್ಯಗೆ ಪರಿಹಾರವನ್ನು ಕಾನೂನಾತ್ಮಕವಾಗಿಯೇ ಒದಗಿಸಬೇಕು.
ಅಂದರೆ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ನಿಗಮದ ಉನ್ನತ ಅಧಿಕಾರಿಗಳು ಮುಂದಾದರೆ ಚಾಲನಾ ಸಿಬ್ಬಂದಿಗೆ ಕಿಡಿಗೇಡಿಗಳಿಂದ ಆಗುತ್ತಿರುವ ಇಂಧ ಹಲ್ಲೆಯನ್ನು ತಡೆಗಟ್ಟಬಹುದಾಗಿದೆ.