- ಬಸ್ ತೊಳೆಯುವ ಸ್ವಯಂಚಾಲಿತ ಯಂತ್ರವೂ ಬಂದ್
- ನೀರಿಲ್ಲದೆ ಹಾಳಾಗುತ್ತಿದೆ ಶುದ್ಧ ಕುಡಿಯುವ ನೀರಿನ ಘಟಕ
- ಶೌಚಾಲಯಕ್ಕೂ, ಪ್ರಯಾಣಿಕರು ಕುಡಿಯೋದಕ್ಕೂ ನೀರಿಲ್ಲ.
ಬಾಗಲಕೋಟೆ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ ಹಾಗೂ ಘಟಕದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಂತರ್ಜಲ-ಬೋರ್ವೆಲ್ ಬತ್ತಿದ್ದು ಒಟ್ಟಾರೆ ಶೌಚಾಲಯಕ್ಕೂ, ಪ್ರಯಾಣಿಕರು ಕುಡಿಯೋದಕ್ಕೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ.
ಆ ಜಿಲ್ಲೆಯಲ್ಲಿ ಮೂರು ನದಿಗಳಿದ್ದು ಮೂರೂ ನದಿಗಳು ಒಣಗಿ ಹೋಗಿವೆ. ಮುಂಗಾರು ಹಿಂಗಾರು ಎರಡೂ ಕಾಲದ ಮಳೆ ಕೈಕೊಟ್ಟಿರುವುದರಿಂದ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದೆ. ಇಷ್ಟು ದಿನ ನೀರಿನ ಪರಿಸ್ಥಿತಿ ಹೇಗೋ ನಿರ್ವಹಣೆ ಆಗುತ್ತಿತ್ತು. ಆದರೆ ಈಗ ಜಲಕ್ಷಾಮ ಶುರುವಾಗಿದೆ.
NWKRTC ಜಿಲ್ಲೆಯ ಬಸ್ ನಿಲ್ದಾಣ ಘಟಕಕ್ಕೂ ಬರದ ಬಿಸಿ ತಟ್ಟಿದೆ. ಬಸ್ ತೊಳೆಯುವ ಸ್ವಯಂಚಾಲಿತ ಯಂತ್ರ ನಿಂತುಹೋಗಿದೆ. ಇತ್ತ ಶುದ್ದ ಕುಡಿಯುವ ನೀರಿನ ಘಟಕ. ಶೌಚಾಲಯಕ್ಕೂ ನೀರಿಲ್ಲ. ಪ್ರಯಾಣಿಕರು ಕುಡಿಯೋದಕ್ಕೂ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಲ್ಲದೆ ನಿಲ್ದಾಣದಲ್ಲಿದ್ದ ಒಂದೇ ಒಂದು ಬೋರ್ವೆಲ್ ಕೂಡ ಬತ್ತಿಹೋಗಿದೆ. ಇದರಿಂದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಪ್ರಯಾಣಿಕರಿಗೆ ನಿಗಮದ ಸಿಬ್ಬಂದಿಗಳಿಗೆ ನೀರಿಲ್ಲದಂತಾಗಿದ್ದು, ದಾಹ ತೀರಿಸಿಕೊಳ್ಳುವುದಕ್ಕೂ ಪರಿತಪ್ಪಿಸುವಂತಾಗಿದೆ.
ಇನ್ನು ಮೆಕ್ಯಾನಿಕ್‌ಗಳು, ಚಾಲಕರು, ನಿರ್ವಾಹಕರು ಸೇರಿದಂತೆ ಎಲ್ಲ ಸಿಬ್ಬಂದಿಗಳಿಗೆ ಕುಡಿಯಲು ನೀರಿಲ್ಲ. ಹೀಗಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಎಲ್ಲರೂ ಪರದಾಡುವಂತಾಗಿದ್ದು, ಕೂಡಲೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಬಸ್‌ಗಳನ್ನು ತೊಳೆಯುವ ಸ್ವಯಂಚಾಲಿತ ಯಂತ್ರಕ್ಕೆ ನೀರಿಲ್ಲ. ಯಂತ್ರದಿಂದ ಬಸ್‌ಗಳನ್ನು ತೊಳೆಯಲಾಗುತ್ತಿಲ್ಲ. ಶುಚಿತ್ವಕ್ಕೆ ಅಂತ ಬಂದ ಬಸ್‌ಗಳು ನಿಂತಲ್ಲೇ ನಿಂತಿವೆ. ಬಾಗಲಕೋಟೆ ಡಿಪೊದಲ್ಲಿ ನಿತ್ಯ 100-120 ಬಸ್‌ಗಳನ್ನು ತೊಳೆಯಲಾಗುತ್ತಿತ್ತು. ಆದರೆ ಈಗ ಒಂದೇ ಒಂದು ಬಸ್ಸನ್ನು ತೊಳೆಯುವುದಕ್ಕೂ ನೀರಿಲ್ಲ.
ತಾತ್ಕಾಲಿಕವಾಗಿ ಅಗ್ನಿಶಾಮಕ ದಳ ವಾಹನದ ಮೂಲಕ ನೀರನ್ನು ತಂದು ಸ್ವಲ್ಪಮಟ್ಟಿಗೆ ಸಂಗ್ರಹಿಸಲಾಗಿದೆ. ಒಂದು ಬೋರ್ವೆಲ್ ಹೊರತುಪಡಿಸಿ ಇನ್ನೊಂದು ಬೋರ್ವೆಲ್ ಇಲ್ಲದ ಕಾರಣ ಇಂತಹ ಪರಿಸ್ಥಿತಿ ಬಂದಿದೆ. ಆದರೂ ಇನ್ನು ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.
ಮತ್ತೊಂದು ಬೋರ್ವೆಲ್ ಕೊರೆಸದೆ ಹಾಗೆ ಬಿಟ್ಟಿರೋದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಅಂತರ್ಜಲ ಬತ್ತಿದ ಪರಿಣಾಮ ಇದ್ದ ಒಂದು ಬೋರ್ವೆಲ್ ಬತ್ತಿದೆ. ಇನ್ನೊಂದು ಬೋರ್ವೆಲ್ ಕೊರೆಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ತಾತ್ಕಾಲಿಕವಾಗಿ ಅಗ್ನಿಶಾಮಕದಳ ವಾಹನದ ನೀರನ್ನು ಅವಶ್ಯಕತೆಗೆ ಬಳಸಿಕೊಂಡಿದ್ದೇವೆ.ಆದಷ್ಟು ಬೇಗ ಸಮಸ್ಯೆ ಸರಿಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ.