KSRTC ಬಸ್ ಮಣ್ಣು ಸಾಗಿಸುತ್ತಿದ್ದ ಲಾರಿ ನಡುವೆ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರಗಾಯ

ಕುಂದಾಪುರ: ಪ್ರಯಾಣಿಕರಿಂದ ತುಂಬಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಹಲವರು ಗಾಯಗೊಂಡಿರುವ ಭೀಕರ ಅಪಘಾತ ಸೋಮವಾರ (ಜ5) ಸಂಜೆ ತಾಲೂಕಿನ ತಲ್ಲೂರು-ನೇರಳಕಟ್ಟಿ ಮಾರ್ಗದ ಶೆಟ್ರಕಟ್ಟಿ ತಿರುವಿನಲ್ಲಿ ನಡೆದಿದೆ.

ಕುಂದಾಪುರದಿಂದ ಸಿದ್ದಾಪುರ ಕಡೆಗೆ ತೆರಳುತ್ತಿದ್ದ KSRTC ಸಂಸ್ಥೆ ಬಸ್‌ಗೆ ನೇರಳಕಟ್ಟೆಯಿಂದ ಮಣ್ಣು ತುಂಬಿಸಿಕೊಂಡು ತಲ್ಲೂರಿನತ್ತ ತೆರಳುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ಅವಘಾತದ ತೀವ್ರತೆಗೆ ಬಸ್‌ನ ಬಲ ಬದಿ ಸಂಪೂರ್ಣ ಜಖಂ ಗೊಂಡಿದ್ದು ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಾರ್ವಜನಿಕರು ಕೂಡಲೇ ದಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲು ನೆರವಾದರು. ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ಟಿಪ್ಪರ್ ಚಾಲಕ ರಾಘವೇಂದ್ರ ಎಂಬುವವರು ಕೂಡ ಗಾಯಗೊಂಡಿದ್ದು, ಅವರನ್ನು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ. ಟಿಪ್ಪರ್ ಮುಂಭಾಗವು ಜಖಂಗೊಂಡಿದ್ದು ಟೈರ್ ಕೂಡ ಸಿಡಿದಿದೆ. ಇದು ಅಪಘಾತದ ತೀವ್ರತೆಯನ್ನು ಸಾರಿ ಹೇಳುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳ ರಕ್ಷಣೆಗೆ ಕಾರ್ಯ್ಲಗಲಿ ನೇರವಾದರು. ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿ ಅನೇಕರು ಇನ್ನೂ ಆತಂಕದಿಂದ ಹೊರ ಬಂದಿಲ್ಲ.
ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ಅಮೂಲ್ಯ ಜೀವಗಳಿಗೆ ಅಪಾಯಕಾರಿ: ಈ ಅಪಘಾತದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಟಿಪ್ಪರ್ ವಾಹನಗಳು ಅತೀವೇಗವಾಗಿ ಸಂಚರಿಸುತ್ತಿರುವುದು ಅಮೂಲ್ಯ ಜೀವಗಳಿಗೆ ಅಪಾಯಕಾರಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಿಯಮಗಳನ್ನು ಉಲ್ಲಂಘಿಸಿ ಅಜಾಗರೂಕತೆಯಿಂದ ಟಿಪ್ಪರ್‌ಗಳು ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಸಾವು–ನೋವುಗಳನ್ನು ತಪ್ಪಿಸಲು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಟಿಪ್ಪರ್‌ಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
Related









