ಬಾಗಲಕೋಟೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೇಲಧಿಕಾರಿಗಳ ಕಿರುಕುಳದಿಂದ ಮನನೊಂದ ನಿಗಮದ ಚಾಲಕ ಕಂ ನಿರ್ವಾಹಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ನಡೆದಿದೆ.
ಶ್ರೀಶೈಲ ವಿಭೂತಿ (45) ಆತ್ಮಹತ್ಯೆ ಮಾಡಿಕೊಂಡವರು. ಬೀಳಗಿಯ ತಮ್ಮ ಮನೆಯಲ್ಲಿ ಶನಿವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೀಳಗಿ NWKRTC ಘಟಕ ವ್ಯವಸ್ಥಾಪಕ ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಿಂದೆ ಅಂದರೆ 2022ರಲ್ಲಿ ಮೇಲಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದ ಶ್ರೀಶೈಲ ಅವರು ಮಾತನಾಡಿದ್ದ ಹಳೆಯ ವಿಡಿಯೋ ಈಗ ಬಹಿರಂಗವಾಗಿದೆ.
ಇತ್ತ ಕಿರುಕುಳ ನೀಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಘಟಕ ಮಟ್ಟದಲ್ಲಿ ಅಧಿಕಾರಿಗಳು ನೌಕರರಿಗೆ ಇನ್ನಿಲ್ಲ ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಡಿಪೋ ಮಟ್ಟದಲ್ಲಿ ಧರಣಿ ಕೂರಬೇಕಾಗುತ್ತಿದೆ ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೀಳಗಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಇತ್ತ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.