NWKRTC: ಲಂಚ ಕೊಡಲು ಒಪ್ಪದ ನಿರ್ವಾಹಕನಿಗೆ ಕಾಟಕೊಟ್ಟ ಡಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ

ಹಾವೇರಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಣೇಬೆನ್ನೂರು ಘಟಕದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಈರಪ್ಪ ಫಕ್ಕೀರಪ್ಪ ಗಡೇದ ಅವರು ತಾವಾಯಿತು ತಮ್ಮ ಕೆಲಸವಾಯಿತು ಎಂದು ತಮ್ಮ ಪಾಡಿಗೆ ತಾವಿದ್ದು ಪ್ರಾಮಾಣಿಕವಾಗಿ ಕರ್ತವ್ಯ ಮಾಡಿಕೊಂಡು ಹೋಗುತ್ತಿದ್ದರು.
ಈ ನಿರ್ವಾಹಕರ ಇಡೀ ಕುಟುಂಬ ಇವರ ಸಂಪಾದನೆಯ ಮೇಲೆಯೇ ಅವಲಂಬಿತವಾಗಿತ್ತು. ಪ್ರಮಾಣಿಕವಾಗಿರುವ ಇವರ ವಿರುದ್ಧ ಸೇವಾ ಅವಧಿಯಲ್ಲಿ ಯಾವುದೇ ದೂರುಗಳಿಲ್ಲ. ಜತೆಗಿದ್ದ ಸಿಬ್ಬಂದಿಗೂ ಗಡೇದ್ ತುಂಬಾ ಆತ್ಮೀಯ ಹಾಗೂ ಸಹಕಾರ ನೀಡುವ ಮನುಷ್ಯ. ಹೀಗಿರುವಾಗಲೇ ರಾಣೆಬೆನ್ನೂರು ಘಟಕ ವ್ಯವಸ್ಥಾಪಕನಾಗಿ ಮಹೇಶ ಎಂಬಾತ ಒಕ್ಕರಿಸಿಕೊಂಡಿದ್ದಾನೆ. ಈ ಮಹೇಶನಿಗೆ ಅಷ್ಟೇನು ವಯಸ್ಸಾಗಿಲ್ಲದಿದ್ದರೂ ಅಹಂಕಾರ ಎಂಬ ನಶೆಯಲ್ಲೇ ತೇಲುವ ವ್ಯಕ್ತಿ. ಜತೆಗೆ ಅಲ್ಪ ಕಾಲದಲ್ಲೇ ಭಾರಿ ಶ್ರೀಮಂತನಾಗಬೇಕು ಎಂಬ ದುರಾಲೋಚನೆ ಇತ್ತೋ ಏನೋ ಗೊತ್ತಿಲ್ಲ. ಆದರೆ, ಅಕ್ರಮವಾಗಿ ಹಣ ಸಂಪಾದನೆ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದು, ಪ್ರಮಾಣಿಕ ನೌಕರರಿಗೆ ಕಿರುಕುಳ ಕೊಡುವುದಕ್ಕೆ ಶುರುಮಾಡಿದ್ದ.
ಅಲ್ಲದೆ ತನ್ನ ಲಂಚದಾಹಕ್ಕೆ ಒಳಗಾಗದ ನೌಕರರನ್ನು ಮಾನಸಿಕವಾಗಿ ಹಿಂಸಿಸುವುದರ ಜತೆಗೆ ಟಾರ್ಗೆಟ್ ಕೂಡ ಮಾಡುತ್ತಿದ್ದ. ತಿಂಗಳಿಗೆ ವಂತಿಕೆ (ಲಂಚ) ಕೊಡಬೇಕು ಎಂದು ಚಾಲನಾ ಸಿಬ್ಬಂದಿಗಳಿಗೆ ತಾಕೀತು ಮಾಡಿದ್ದಲ್ಲದೆ ಇಷ್ಟೇ ಹಣವನ್ನು ತಂದುಕೊಡಬೇಕು ಎಂದು ಮೌಖಿಕ ಆದೇಶ ಕೂಡ ಮಾಡಿದ್ದ ಎಂಬ ಆರೋಪ ಕೂಡ ಇದೆ. (ಬಹುತೇಕ ಎಲ್ಲ ಘಟಕಗಳು ವಿಭಾಗಗಳಲ್ಲೂ ಈ ಹಿಂದೆ ಇದು ಸರ್ವೆ ಸಾಮಾನ್ಯವಾಗಿ ನಡೆಯುತ್ತಿತ್ತು. ಆದರೆ, ಈಗ ಬಹುತೇಕ ಅಧಿಕಾರಿಗಳು ಸುದ್ದಿ ಮಾಧ್ಯಮಗಳ ಭಯದಿಂದ ಲಂಚ ಪಡೆಯುವುದಕ್ಕೆ ತಮಗೆ ತಾವೆ ಕಡಿವಾಣಹಾಕಿಕೊಂಡಿದ್ದಾರೆ.)
ಇನ್ನು ಇತ್ತ ಈ ಮಹೇಶನ ಬೇಡಿಕೆಗೆ ಅನಿವಾರ್ಯವಾಗಿ ಒಪ್ಪಿಕೊಂಡು ಬಹುತೇಕ ನೌಕರರು ತಿಂಗಳು ತಿಂಗಳು ವಂತಿಕೆ ಕೊಡುತ್ತಿದ್ದರು. ಆದರೆ, ನಾನು ಸಂಸ್ಥೆಗೆ ಹಾಗೂ ನನ್ನ ಕರ್ತವ್ಯದಲ್ಲಿ ಪ್ರಾಮಾಣಿಕನಾಗಿದ್ದೇನೆ ನನಗೆ ಲಂಚಕೊಡುವುದು ಗೊತ್ತಿಲ್ಲ ತೆಗೆದುಕೊಳ್ಳುವುದು ಗೊತ್ತಿಲ್ಲ ಎಂದು ಗಡೇದ್ ಮಹೇಶ ಕೇಳಿದ ಲಂಚದ ಹಣ ಕೊಡಲು ನಿರಾಕರಿಸಿದ್ದಾರೆ.
ಅಷ್ಟೆಕ್ಕೆ ಜಿದ್ದಿಗೆ ಬಿದ್ದ ಮಹೇಶ: ಘಟಕ ವ್ಯವಸ್ಥಾಪಕ ಮಹೇಶ್‌ಗೆ ಹಣ ನೀಡುವುದಕ್ಕೆ ಗಡೇದ್ ನಿರಾಕರಿಸುತ್ತಾರೆ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತ ಬಂದಿದ್ದೇನೆ. ನನ್ನ ವಿರುದ್ಧ ಯಾವುದೇ ದೂರು ಇಲ್ಲ. ಇದ್ದರೆ ಅವುಗಳ ವಿಚಾರಣೆಗೂ ನಾನು ಸಿದ್ಧ ಹೀಗಿರುವಾಗ, ನಿಮಗೇಕೆ ಲಂಚ ಕೊಡಬೇಕೆಂದು ಪ್ರಶ್ನಿಸಿದ್ದಾರೆ. ಘಟಕ ವ್ಯವಸ್ಥಾಪಕ ಮಹೇಶಗೆ ಈತನ ವಿರುದ್ದ ಕೆರಳಲು ಇಷ್ಟು ಸಾಕಾಯಿತು. ಇದು ನಡೆದಿದ್ದು 2012ರ ಏಪ್ರಿಲ್ 10ರಂದು.
ಇನ್ನು ಮರುದಿನ ಅಂದರೆ 2012 ಏಪ್ರಿಲ್ 11ರಂದು ಎಂದಿನಂತೆ ಡ್ಯೂಟಿಗೆ ಬಂದ ಗಡೇದ್ ಅವರಿಗೆ ಆಘಾತ ಕಾದಿತ್ತು. ಅವರಿಗೆ ಡ್ಯೂಟಿ ಕೊಡಲು ನಿರಾಕರಿಸಲಾಯಿತು. ಅದಕ್ಕೆ ಕಾರಣಗಳನ್ನು ಕೂಡ ನೀಡಲಿಲ್ಲ. ಹಾಜರಿ ಪುಸ್ತಕಕ್ಕೆ ಸಹಿ ಮಾಡಲೂ ಅವರಿಗೆ ಬಿಟ್ಟಿಲ್ಲ, ನಿನಗೆ ಡ್ಯೂಟಿ ಕೊಡಲ್ಲ ಏನ್ ಮಾಡ್ತಿಯೋ ಮಾಡ್ಕೋ ಹೋಗು ಎಂದು ದಬಾಯಿಸಿದ್ದಾನೆ ಡಿಎಂ ಮಹೇಶ. ಮರುದಿನವೂ ಇದೇ ಪುನರಾವರ್ತನೆ. ಲಿಖಿತವಾಗಿ ಇದ್ದಕ್ಕೆ ಯಾವುದೇ ಹೇಳಿಕೆ ನೀಡದ ಡಿಎಂ ಗಡೇದ್ ಅವರಿಗೆ ಕಾಟಕೊಡುವುದನ್ನು ಮುಂದುವರಿಸಿದ್ದಾನೆ.

ಆಗ ಅನಿವಾರ್ಯವಾಗಿ ಗಡೇದ್ ಅವರು ರಾಣೆಬೆನ್ನೂರಿನಲ್ಲಿರುವ ಮಾಹಿತಿ ಹಕ್ಕು ತಜ್ಞ ರಾಜಶೇಖರ್ ಅವರನ್ನು ಭೇಟಿಯಾಗಿ ಸಮಸ್ಯೆ ವಿವರಿಸಿದ್ದಾರೆ. ಈ ಕುರಿತು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ರಾಜಶೇಖರ್ ಪತ್ರ ಬರೆದು ಸಮಸ್ಯೆ ವಿವರಿಸಿದ್ದಾರೆ. ಕಾರಣ ನೀಡದೇ ಕೆಲಸ ಕೊಡುತ್ತಿಲ್ಲ, ಘಟಕ ವ್ಯವಸ್ಥಾಪಕ ಮಹೇಶ್‌ಗೆ ತಿಳಿವಳಿಕೆ ಹೇಳಿ, ಸಮಸ್ಯೆ ಇತ್ಯರ್ಥಪಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆದರೆ, ವಿಭಾಗೀಯ ನಿಯಂತ್ರಣಾಧಿಕಾರಿ ಏನು ಕ್ರಮ ತೆಗೆದುಕೊಂಡರೋ ಗೊತ್ತಿಲ್ಲ. ಇತ್ತ ಈ ಕಿರಾತಕ ಡಿಎಂ ಮಹೇಶ್ ತನ್ನ ಜಿದ್ದು ಮುಂದುವರಿಸಿದ್ದಾನೆ. ಗಡೇದ್ ಅವರಿಗೆ ಡ್ಯೂಟಿ ಕೊಡುವುದಿಲ್ಲ. ಇದರಿಂದ ಸಂಬಳವಿಲ್ಲದೆ ಮನೆಯಲ್ಲಿ ಸಮಸ್ಯೆ ಹೆಚ್ಚಾಗುತ್ತದೆ. ಆಗ ಗಡೇದ್ ತಾಯಿ, ಅಣ್ಣ, ರಾಜಶೇಖರ್ ಹಾಗೂ ಇನ್ನಿತರರು ಘಟಕ ವ್ಯವಸ್ಥಾಪಕ ಮಹೇಶನ ಭೇಟಿಯಾಗುತ್ತಾರೆ. ಆದರೆ, ಮಹೇಶ ಇವರ ಮನವಿಗೆ ಪ್ರತಿಕ್ರಿಯಿಸುವುದಿಲ್ಲ. ಗಡೇದ್ ತಾಯಿ ಅವರು ಕಾಲಿಗೆ ಬಿದ್ದರೂ ಆ ವ್ಯಕ್ತಿ ಕಾಲು ಬಿಡಿಸಿಕೊಂಡು ಹೋಗುತ್ತಾನೆ. ಇತ್ತ ಏನು ಮಾಡುವುದು ಎಂದು ತೋಚದೆ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಭೇಟಿ ಮಾಡೋಣ ಎಂದು ಈ ಎಲ್ಲರೂ ಹಾವೇರಿಗೆ ಹೋಗುತ್ತಾರೆ. ಆದರೆ ಅಲ್ಲಿ ಭದ್ರತಾ ಸಿಬ್ಬಂದಿ ಡಿಸಿಯನ್ನು ಭೇಟಿ ಮಾಡಲು ಒಳಗೆ ಬಿಡುವುದಿಲ್ಲ.
ನೆರವಿಗೆ ಬಂದ ಆರ್‌ಟಿಐ: ವಿಭಾಗೀಯ ನಿಯಂತ್ರಣಾಧಿಕಾರಿ ಕೂಡ ಇವರನ್ನು ಕರೆದು ಮಾತನಾಡುವ ಸೌಜನ್ಯವನ್ನು ತೋರಲಿಲ್ಲ. ಮೇಲಿಂದ ಇಳಿದು ಬಂದವನಂತೆ ಆತ ಕೂಡ ನಡೆದುಕೊಂಡಿದ್ದಾನೆ. ಇನ್ನು ಅನಿವಾರ್ಯವಾಗಿ ಹುಬ್ಬಳ್ಳಿಯಲ್ಲಿರುವ NWKRTC ಕೇಂದ್ರ ಕಚೇರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುತ್ತಾರೆ. ಅದನ್ನು ಸಲ್ಲಿಸಿ 30 ದಿನ ಕಳೆದರೂ ಕೂಡ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. 30 ದಿನಗಳ ನಂತರ ಮತ್ತೆ ಅರ್ಜಿ ಸಲ್ಲಿಸಿದಾಗ ಪ್ರಧಾನ ಕಚೇರಿಯಿಂದ ಉತ್ತರ ಬರುತ್ತದೆ. ಅದರಲ್ಲಿ ಲಗತ್ತಿಸಿದ ದಾಖಲೆಗಳನ್ನು ನೋಡಿದ ಗಡೇದ್ ಮತ್ತು ರಾಜರೇರ್ಖಗೆ ಆಶ್ಚರ್ಯ ಮತ್ತು ಆಘಾತವಾಗಿದೆ.
ಅದೇನೆಂದರೆ ಗಡೇದ್ ಅವರಿಗೆ ಯಾವುದೇ ಮಾಹಿತಿ ನೀಡದೇ ಅವರ ವಿರುದ್ಧ ಇಲಾಖೆ ಆರೋಪಗಳ ಮೇಲೆ ಆರೋಪಗಳನ್ನು ಹೊರಿಸಿ ಫೈಲ್‌ಗೆ ಸೇರಿಸುತ್ತ ಹೋಗಿದ್ದಾರೆ. ಅಷ್ಟೇ ಅಲ್ಲ, ಅಧೀನ ಸಿಬ್ಬಂದಿಯಿಂದ ಗಡೇದ್ ವಿರುದ್ಧ ದೂರು ಪಡೆದುಕೊಂಡಿದ್ದು, ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ, ಬೆದರಿಕೆ, ಗೇಟ್ ಮೀಟಿಂಗ್, ಮಾಧ್ಯಮದೆದುರು ಸಂಸ್ಥೆ ವಿರುದ್ಧ ಮಾಹಿತಿ ನೀಡಿದ್ದು, ಬಂದ್ ಮಾಡಿಸಿದ್ದು ಸೇರಿದಂತೆ ಹಲವಾರು ಕಪೋಲಕಲ್ಪಿತ ಆರೋಪಗಳ ದಾಖಲೆಗಳನ್ನು ಸೃಷ್ಟಿಸಿ, ಗಡೇದ್ ಅವರ ಈ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಅವರನ್ನು ಹೊರ ವಿಭಾಗಕ್ಕೆ ಅಂದರೆ, ಬೆಳಗಾವಿ ಜಿಲ್ಲೆಯ ರಾಮದುರ್ಗ ಡಿಪೋಗೆ ವರ್ಗಾವಣೆ ಮಾಡಲಾಗಿದೆ ಎಂದು RTIನಡಿ ಸಂಸ್ಥೆ ದಾಖಲೆ ನೀಡಿದೆ.
ಅಲ್ಲಿಗೆ ಸಾರಿಗೆ ಸಂಸ್ಥೆಯ ದುಷ್ಟ ಅಧಿಕಾರಿಗಳ ಹುನ್ನಾರ ಗಡೇದ್ ಮತ್ತು ರಾಜಶೇಖರಿಗೆ ಸ್ಪಷ್ಟವಾಗುತ್ತದೆ. ಅನಿವಾರ್ಯವಾಗಿ ಮಾಹಿತು ಹಕ್ಕು ಕಾಯ್ದೆ ಮೊರೆ ಹೋಗುವ ಇವರು, ತಮ್ಮ ಮೇಲೆ ಮಾಡಲಾಗಿರುವ ಆರೋಪಗಳನ್ನು ದೃಢಪಡಿಸುವ ದಾಖಲೆಗಳನ್ನು ಪೂರೈಸುವಂತೆ ಅರ್ಜಿ ಸಲ್ಲಿಸುತ್ತಾರೆ.
ಸಿಕ್ಕಿಹಾಕಿಕೊಂಡ ಸಾರಿಗೆ ಸಂಸ್ಥೆ: ಆದರೆ ಅಂತ ಘಟನೆಗಳು ನಡೆದಿದ್ದರೆ ತಾನೆ ದಾಖಲೆಗಳು ಸಿಗೋದು! ತನ್ನ ಬಳಿ ಅವನ್ನು ದೃಢಪಡಿಸುವ ಯಾವುದೇ ದಾಖಲೆಗಳು ಇಲ್ಲ ಎಂದು ಸಂಸ್ಥೆ ಕೈ ಎತ್ತುತ್ತದೆ. ಈ ಉತ್ತರ ಇಟ್ಟುಕೊಂಡ ಗಡೇದ್ ಕಾರ್ಮಿಕ ಇಲಾಖೆಯ ಮೊರೆ ಹೋಗುತ್ತಾರೆ. ವಿಚಾರಣೆ ನಡೆಸಿದಾಗ ಗಡೇದ್ ವಿರುದ್ಧ ಆರೋಪ ಮಾಡಿದ್ದರೆನ್ನಲಾದ ಎಲ್ಲ ಸಿಬ್ಬಂದಿಗಳು ತಮಗೆ ಏನೂ ಗೊತ್ತಿಲ್ಲ, ಘಟಕ ವ್ಯವಸ್ಥಾಪಕ ಮಹೇಶ ನಮ್ಮ ಗಮನಕ್ಕೆ ಬಾರದಂತೆ ನಮ್ಮ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾರ್ಮಿಕ ಇಲಾಖೆಗೆ ಪ್ರಮಾಣಪತ್ರ ಸಲ್ಲಿಸುತ್ತಾರೆ.
ನಂತರ ಈ ಎಲ್ಲ ದಾಖಲೆಗಳನ್ನಿಟ್ಟುಕೊಂಡ ಗಡೇದ್ ರಾಣೆಜಿನ್ನೂರಿನ ಜೆಎಂಎಫ್‌ಸಿ ನ್ಯಾಯಾಯಲದ ಮೊರೆ ಹೋಗಿ ಪ್ರಕರಣ ದಾಖಲಿಸುತ್ತಾರೆ. ಈ ಪ್ರಕಣದ ವಿಚಾರಣೆ ನಡೆಸಿದ ನ್ಯಾಯಾಲಯ ಡಿಎಂ ಮಹೇಶನ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಮಹೇಶನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಆದೇಶಿಸುತ್ತದೆ. ಸದ್ಯ ಈಗ ಪ್ರಕರಣ ಹೈಕೋರ್ಟ್‌ನಲ್ಲಿರುವುದರಿಂದ ಹೆಚ್ಚಿನ ವಿವರ ನೀಡಲಾಗುತ್ತಿಲ್ಲ.
ನೋಡಿ ಒಬ್ಬ ಅಧಿಕಾರಿ ದೌರ್ಜನ್ಯಕ್ಕೆ ಮುಂದಾದಾಗ ಏನೂ ಮಾಡಲಿಕ್ಕೂ ಹೇಸುವುದಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸ್ಪಷ್ಟ ನಿದರ್ಶನವಾಗಿದೆ.
ಇನ್ನಾದರೂ ಸಾರಿಗೆ ಸಂಸ್ಥೆಯಲ್ಲಿರುವ ಅಧಿಕಾರಿಗಳು ಚಾಲನಾ ಸಿಬ್ಬಂದಿಗಳನ್ನು ಮೂರನೇ ಗ್ರಹದಿಂದ ಬಂದವರಂತೆ ಕಾಣುವುದನ್ನು ಬಿಟ್ಟು ಅವರೇ ಸಂಸ್ಥೆಯ ಅಡಿಪಾಯವಾಗಿದ್ದಾರೆ ಎಂದು ಅರಿತು ಅವರಿಗೆ ಸಕಲ ಗೌರವಗಳನ್ನು ಕೊಡಬೇಕು. ಜತೆಗೆ ತಮ್ಮ ಅಧೀನ ನೌಕರರಿಂದ ಲಂಚ ಪಡೆಯಬೇಕು ಎಂಬ ದುರ್ಬುದ್ಧಿಯನ್ನು ಬಿಡಬೇಕು. ಇಲ್ಲದಿದ್ದರೆ ಈ ಮಹೇಶ ಪ್ರಸ್ತುತ ಎದುರಿಸುತ್ತಿರುವುದು ಮುಂದೆ ನಿಮ್ಮನ್ನು ಹುಡುಕಿಕೊಂಡು ಬರಬಹುದು ಎಚ್ಚರ.
Related








