CRIMENEWSನಮ್ಮರಾಜ್ಯ

NWKRTC-ಬ್ರೇಕ್‌ ಹಿಡಿಯದ ಬಸ್‌ಕೊಟ್ಟು ತಪ್ಪುಮಾಡಿದ ನಾಲಾಯಕ್‌ ಡಿಸಿ, ಡಿಎಂಇ: ತಪ್ಪಿನಿಂದ ಪಾರಾಗಲು ಹಾರಹಾಕಿ ಚಾಲಕರ ಅವಮಾನಿಸಿ ದರ್ಪ ಮೆರೆದ ದುರಹಂಕಾರಿಗಳು

ಡಿಸಿ ಸಿದ್ದಲಿಂಗೇಶ್‌, ಡಿಎಂಇ ಪ್ರವೀಣ್‌.
ವಿಜಯಪಥ ಸಮಗ್ರ ಸುದ್ದಿ
  • ಅಧಿಕಾರ ಮದದಲ್ಲಿ ತೇಲುತ್ತಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹ
  • ಅಮಾನತು ಮಾಡದಿದ್ದರೆ ಕೇಂದ್ರ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಎಚ್ಚರಿಕೆ ಕೊಟ್ಟ ಕೂಟ

ಧಾರವಾಡ: ಬ್ರೇಕ್‌ ಹಿಡಿಯದ ಬಸ್‌ಗಳನ್ನು ಚಾಲಕರಿಗೆ ಕೊಟ್ಟಿದ್ದ ಪರಿಣಾಮ ಬಸ್‌ ಹಿಂದಿನಿಂದ ಮುಂದೆ  ಹೋಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಆದರೆ, ಇದನ್ನು ಬೇಕಂತಲೇ ಇಬ್ಬರೂ ಚಾಲಕರು ಮಾಡಿದ್ದಾರೆ ಎಂದು ಅವರಿಗೆ ಹೂವಿನ ಹಾರ ಹಾಕಿ ಅಧಿಕಾರಿಗಳು ಭಾರಿ ಅವಮಾನ ಮಾಡಿರುವ ಘಟನೆ ಧಾರವಾಡದಲ್ಲಿ ನಿನ್ನೆ ನಡೆದಿದೆ.

ನಿನ್ನೆ ಅಂದರೆ ಬುಧವಾರ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ BRTS ಹುಬ್ಬಳ್ಳಿ ಘಟಕಕ್ಕೆ ಸೇರಿದ ಬಸ್‌ಗಳು ಬ್ರೇಕ್ ಸರಿಯಾಗಿ ಹಿಡಿಯದ ಕಾರಣ ಧಾರವಾಡ ನಗರದ ಟೋಲ್ ನಾಕಾ ಹತ್ತಿರ ಸಣ್ಣ ಮಟ್ಟದ ಅಪಘಾತವಾಗಿದೆ.

ಇನ್ನು ಈ ಟೋಲ್ ನಾಕಾಭಾಗದಲ್ಲಿ ಅವೈಜ್ಞಾನಿಕವಾಗಿ BRTS ಸಂಸ್ಥೆ ರಸ್ತೆ ನಿರ್ಮಿಸಿದ್ದರಿಂದ ಈ ಜಾಗದಲ್ಲಿ ಮಳೆ ಬಿದ್ದ ಸಂದರ್ಭದಲ್ಲಿ ನೀರು ನಿಲ್ಲುತ್ತದೆ. ಅದೇ ಜಾಗದಲ್ಲಿ ಚಾಲಕ ಜಗದೀಶ್ ಹೊಸಮನಿ 20 ಅಡಿ ಹಿಂದಿನಿಂದ (ವಾಹನ ಸಂಖ್ಯೆ KA 25 F 3475) ಬಸ್‌ ಬ್ರೇಕ್ ಹಾಕಿದ್ದಾರೆ. ಆದರೆ ಅದು ನಿಲ್ಲದೆ ಮುಂದೆ ಹೋಗಿ ನಾಗಪ್ಪ ಮಾದರ ಅವರು ಚಲಾಯಿಸುತ್ತಿದ್ದ ವಾಹನಕ್ಕೆ ಗುದ್ದಿದೆ.

ಈ ವೇಳೆ ಒಂದು ವಾಹನದ ಹಿಂದಿನ ಹಾಗೂ ಮತ್ತೊಂದು ಬಸ್‌ನ ಮುಂದಿನ ಗಾಜುಗಳು ಜಖಂ ಆಗಿದ್ದು ಚಾಲಕರ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಈ ವಿಷಯವನ್ನು ತಿಳಿದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಲಿಂಗೇಶ್  ಹಾಗೂ ಡಿಎಂಇ ಪ್ರವೀಣ್ ಆ ಚಾಲನಾ ಸಿಬ್ಬಂದಿಗಳನ್ನು ಧಾರವಾಡ ಘಟಕಕ್ಕೆ ಕರೆಸಿಕೊಂಡು ಘಟನೆಯ ವಿವರವನ್ನು ಪಡೆಯದೆ ಅವರಿಗೆ ತಿಳಿವಳಿಕೆಯನ್ನೂ ಸಹ ನೀಡದೆ ಧಾರವಾಡ ಘಟಕದ ಘಟಕ ವ್ಯವಸ್ಥಾಪಕ ಹಟ್ಟಿ ಯವರಿಂದ ಹೂವಿನ ಹಾರ ಹಾಕಿಸಿ ಅವಮಾನ ಮಾಡುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ.

ಆ ಸಮಯದಲ್ಲಿ ಡಿಸಿ ಸಿದ್ದಲಿಂಗೇಶ ಧಾರವಾಡದಲ್ಲಿ ಇದ್ದು ಈ ಅಮಾನವೀಯ ಘಟನೆ ಜರುಗುವಂತೆ ಮಾಡಿದ್ದಾರೆ. ಇದನ್ನು ನೌಕರರ ಕೂಟವು ಬಲವಾಗಿ ಖಂಡಿಸಿದ್ದು ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿ, DME ಹಾಗೂ ಘಟಕ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಅವರನ್ನು ಅಮಾನತು ಮಾಡಬೇಕು ಇಲ್ಲದಿದ್ದರೆ ಕೇಂದ್ರ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಾಧ್ಯಕ್ಷ ಚಂದ್ರಶೇಖರ್‌, ವಲಯ ಮಟ್ಟದ ಕಾರ್ಯಾಧ್ಯಕ್ಷರಾದ V.G ಪೂಜಾರ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಡಿಸಿ ಮತ್ತು ಡಿಎಂಇ ಇಬ್ಬರಿಗೂ ವಯಸ್ಸಾಗಿದೆ ಆದರೆ, ನೌಕರರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬ ಪರಿಜ್ಞಾನ ಮಾತ್ರ ಇಲ್ಲ. ಜತೆಗೆ ಅಧಿಕಾರ ದರ್ಪದಿಂದ ನೌಕರರನ್ನು ಈರೀತಿ ಅವಮಾನ ಮಾಡಿದ್ದಾರಲ್ಲ, ಮೊದಲು ಇವರಿಗೆ ಹೂವಿನ ಹಾರ ಹಾಕಬೇಕು. ಕಾರಣ ಬ್ರೇಕ್‌ ಹಿಡಿಯದ ಬಸ್ಸನ್ನು ಕೊಟ್ಟು ಓಡಿಸುವುದಕ್ಕೆ ಹೇಳಿರುವುದು ಇವರೆ ಅಲ್ಲವಾ?

ಇನ್ನು ತಾವು ಮಾಡಿದ ತಪ್ಪನ್ನು ಮುಚ್ಚಿಕೊಂಡು ತಮ್ಮ ಕೈಯಲ್ಲಿ ಅಧಿಕಾರವಿದೆ ಎಂದು ನೌಕರರ ಮೇಲೆ ನಿಯಮ ಬಾಹಿರವಾಗಿ ಅವಮಾನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಮೊದಲು ಇಂಥ ಕೆಲಸಕ್ಕೆ ಬಾರದ ದುರಹಂಕಾರದ ಅಧಿಕಾರಿಗಳನ್ನು ವಜಾ ಮಾಡಬೇಕು. ಇವರು ಫಿಟ್‌ನೆಸ್‌  ಬಸ್‌ಗಳನ್ನು ಕೊಟ್ಟರೆ ಅಪಘಾತಗಳು ಏಕಾಗುತ್ತವೆ. ಚಾಲಕರಿಗೆ ಬಸ್‌ಗಳ ಡ್ರೈವಿಂಗ್‌ ಬರುವುದಿಲ್ಲವೇ?

ಫಿಟ್‌ಆಗಿರುವ ಬಸ್‌ಗಳನ್ನು ಚಾಲಕರಿಗೆ ಕೊಡದೆ ಈ ರೀತಿ ಅಪಘಾತವಾದಾಗ ಅವರನ್ನು ಅವಮಾನ ಮಾಡುವುದು ಜತೆಗೆ ಬಸ್‌ಗೆ ಆಗಿರುವ  ಹಾನಿಗೆ ಚಾಲಕರ ವೇತನದಲ್ಲಿ ಕಡಿತಮಾಡಿಕೊಳ್ಳುವುದು. ಇದು ಯಾವ ನ್ಯಾಯಸ್ವಾಮಿ? ನಿಜ ಹೇಳಬೇಕು ಎಂದರೆ ಇದಕ್ಕೆಲ್ಲ ನಿಮ್ಮ ಬೇಜವಾಬ್ದಾರಿತನ ಹಾಗೂ ಬಸ್‌ಗಳನ್ನು ಸರಿಯಾಗಿ  ರಿಪೇರಿ ಮಾಡದಿರುವುದೇ ಕಾರಣ. ಅಂದಮೇಲೆ ಈಗ ಹೇಳಿ ಹೂವಿನ ಹಾರವನ್ನು ಯಾರ ಕೊರಳಿಗೆ ಹಾಕಬೇಕು? ನಿಮ್ಮಂತಹ ಕೆಲಸಕ್ಕೆ ಬಾರದ ಅಧಿಕಾರಿಗಳಿಗೆ ಅಲ್ಲವೇ ಎಂದು ನೌಕರರು ಪ್ರಶ್ನಿಸಿದ್ದಾರೆ.

ಅಲ್ಲದೆ, ತಾವು ದೊಡ್ಡವರೆಂದು ಬಿಂಬಿಸಿಕೊಳ್ಳಲು ತಾವು ಮಾಡಿದ ತಪ್ಪಿಗೆ ಚಾಲಕರಿಗೆ ಶಿಕ್ಷೆ ಕೊಟ್ಟುಬಿಡುತ್ತೀರಿ. ಇದನ್ನು ಈ ಹಿಂದೆ ಇದ್ದ ಸಂಘಟನೆಗಳು ಕೇಳುತ್ತಿರಲಿಲ್ಲ. ಆದರೆ ನಾವು ಇಂಥ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಚಂದ್ರಶೇಖರ್‌ ಎಚ್ಚರಿಕೆ ನೀಡಿದ್ದು, ಈ  ರೀತಿ ಕೃತ್ಯ ಎಸಗಿ ಚಾಲನಾ ಸಿಬ್ಬಂದಿಗೆ ಅವಮಾನ ಮಾಡಿರುವ ಈ ಮೂವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಎಂಡಿ ಪ್ರಿಯಾಂಗಾ ಅವರಲ್ಲಿ ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!