ಹುಬ್ಬಳ್ಳಿ: ವಾಯುವ್ಯ ಸಾರಿಗೆ ನಿಗಮದ ಹುಬ್ಬಳ್ಳಿ ಕೇಂದ್ರ ಕಚೇರಿಗೆ ಸಾರಿಗೆ ನೌಕರರ ಕುಟುಂಬ ಸದಸ್ಯರು ಮತ್ತು ಮಕ್ಕಳು ನೂರಾರು ಸಖ್ಯೆಯಲ್ಲಿ ಆಗಮಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಅವರನ್ನು ಭೇಟಿಮಾಡಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾರ್ಚ್ 4ರಿಂದ ಕುಟುಂಬ ಸಮೇತರಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಸಾರ್ವಜನಿಕರ ಸೇವೆಗಳಲ್ಲಿ ಒಂದಾದ ನಮ್ಮ ಸಾರಿಗೆ ಸಂಸ್ಥೆಯ ನೌಕರರು ದಿನಪೂರ್ತಿ ಕರ್ತವ್ಯ ನಿರ್ವಹಿಸಬೇಕು. ಮನೆಗಳನ್ನು ಬಿಟ್ಟು ಎರಡು ಮೂರು ದಿನ ದೂರದ ಊರುಗಳಿಗೆ ಹೋಗಿ ಹಗಲು-ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ವೈಯಕ್ತಿಕವಾಗಿ ಯಾವುದೇ ಕೆಲಸಗಳನ್ನು ಮಾಡಲಾಗದೆ ಕುಟುಂಬದ ಸುಖ-ದುಃಖಗಳಲ್ಲಿ ಭಾಗವಹಿಸಲು ಸಾಧ್ಯವಾಗದೆ ವೈಯಕ್ತಿಕ ಬದುಕನ್ನು ಬದಿಗೆ ಸರಿಸಿದ್ದಾರೆ.
ಇರದರಿಂದ ಅವರ ವೈಯಕ್ತಿಕ ಬದುಕು ಹಾಳಾಗುವುದರ ಜತೆಗೆ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತೆ ಆಗುತ್ತಿದೆ. ಆದರೂ ನೌಕರರ ಪರಿಶ್ರಮದಿಂದ ಸಾರಿಗೆ ನಿಗಮಗಳು ವಿಶ್ವದಲ್ಲೇ ಅತಿ ಹೆಚ್ಚು ಹಾಗೂ ಕುಟುಂಬ ಸದಸ್ಯರ ಮೇಲೆ ಸುಳ್ಳು ಪೊಲೀಸ್ ಕೇಸುಗಳು ದಾಖಳಿಸಿ ನೂರಾರು ನೌಕರರ ಬದುಕನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ.
ಈ ಹಿಂದಿನ ಸರ್ಕಾರದ ಈ ಆಮಾನವೀಯ ನಡೆಯಿಂದ ಬೇಸತ್ತ ನಾವು ಕಾಂಗ್ರೆಸ್ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ನಂಬಿ ನಾವು ಮತ್ತು ನಮ್ಮ ಬಂಧು- ಬಳಗ ಎಲ್ಲರು ಕಾಂಗ್ರೆಸ್‌ಗೆ ಮತದಾನ ಮಾಡಿದ್ದೇವೆ. ಆದರೆ ಈ ಸರ್ಕಾರ ಬಂದು ಸುಮಾರು 10 ತಿಂಗಳುಗಳು ಕಳೆದರು ಯಾವುದೇ ಸಮಸ್ಯೆಗಳನ್ನು ಈವರೆಗೂ ಬಗೆಹರಿಸಿಲ್ಲ. ಇನ್ನು ಪ್ರಣಾಳಿಕೆ ಭರವಸೆಯನ್ನು ಈಡೇರಿಸಿರುವುದಿಲ್ಲ.
ಇನ್ನು ತಮ್ಮ ಸಂಸ್ಥೆಯಿಂದ ನೀಡುತ್ತಿರುವ ಸಂಬಳ ಸರ್ಕಾರಿ ನೌಕರರಿಗೆ ಹಾಗೂ ಇತರ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಆವರಿಗಿಂತ ಕಡಿಮೆ ಇದ್ದು, ನಾವೂ ಕೂಡ ಒಂದೇ ಸಮಾಜದಲ್ಲಿ ಜೀವನ ಸಾಗಿಸುತ್ತಿದ್ದು, ನಮಗೆ ಈ ವೇತನ ಮತ್ತು ಇತರ ಸೌಲಭ್ಯಗಳಿಂದ ತಾರತಮ್ಯವೇಕೆ?
ವೇತನ ವ್ಯತ್ಯಾಸದಿಂದ ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು, ನಿತ್ಯ ಜೀವನ ನಡೆಸಲು ಮತ್ತು ನಮ್ಮ ಮಕ್ಕಳ ಮುಂದಿನ ಭವಿಷ್ಯಗಳನ್ನು ರೂಪಿಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಇದೆ. ದಿನದ 24 ಗಂಟೆಗಳು ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದರಿಂದ ಅನೇಕ ರೋಗಗಳಿಗೆ ತುತ್ತಾಗಿ ಬಹುತೇಕ ನೌಕರರು ನಿವೃತ್ತಿ ಪೂರ್ವದಲ್ಲೇ ನಿಧನ ಹೊಂದುತ್ತಿದ್ದಾರೆ.
ಭಾರತದಲ್ಲಿ ಕರ್ತವ್ಯ ಅವಧಿಯಲ್ಲಿ ಅತಿ ಹೆಚ್ಚು ಮರಣ ಹೊಂದುವ ನೌಕರರು ಯಾರಾದರೂ ಇದ್ದರೆ ಅದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಾಗಿದ್ದಾರೆ ಎಂದರೆ ತಪ್ಪಾಗಲಾರದು. ನಿವೃತ್ತಿ ನಂತರ ಪಿಂಚಣಿ ಸೌಲಭ್ಯ ಇದೆಯೇ ಎಂದು ನೋಡಿದರೆ ಬರುವ ಪಿಂಚಣಿ 1250 ರಿಂದ 3500 ರೂ. ಮಾತ್ರ ಈ ಮೊತ್ತ ಅವರಿಗೆ ಇರುವ ರೋಗಗಳ ಔಷಧಗಳ ಖರೀದಿಗೂ ಸಾಲುವುದಿಲ್ಲ. ಇಷ್ಟೇಲಾ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದ ನಾವು ನಮ್ಮ ನ್ಯಾಯಯುತ ಬೇಡಿಕೆಗಳಗಾಗಿ ಹಿಂದಿನ ಸರ್ಕಾರದ ಮುಂದೆ ಹೋರಾಟ ಮಾಡಿದರೆ ವಜಾ, ವರ್ಗಾವಣೆ, ಅಮಾನತು ಮಾಡುವುದಾಗಿ ನೌಕರರಿಗೆ ಬೆದರಿಕೆ ಹಾಕಿದ್ದಾರೆ.
ಬೇಡಿಕೆಗಳು: ಈ ಹಿಂದೆ ಡಿಸೆಂಬರ್ 2020 ಮತ್ತು ಏಪ್ರಿಲ್ 2021 ರ ಮುಷ್ಕರಕ್ಕೆ ಸಂಬಂದಿಸಿದಂತೆ ಕಾರ್ಮಿಕರ ವಿರುದ್ದವಾಗಿ ಕೈಗೊಂಡ ಎಲ್ಲಾ ಶಿಸ್ತಿನ ಕ್ರಮ, ಡಿಸ್ಮಿಸಲ್ಸ್ ಮತ್ತು ಪೋಲಿಸ್ ಎಫ್.ಐ.ಆರ್ ಪ್ರಕರಣಗಳನ್ನು ರದ್ದುಮಾಡಿ, ಅವರುಗಳು ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕು.
01/01/2020 ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿಯನ್ನು ಪಾವತಿಸುವುದು. ಮುಖ್ಯವಾಗಿ 2020 ರಿಂದ ನಿವೃತ್ತಿಯಾದ ನೌಕರರಿಗೆ 01/01/2020 ರಿಂದ ವೇತನ ವಿಮರ್ಷೆ ಮಾಡಿ ಬಾಕಿ ಹಣವನ್ನು ಮತ್ತು ಹಿಂಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು.
ಇಂದಿನ ಸರ್ಕಾರವು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಪ್ರಣಾಳಿಕೆಯಲ್ಲಿ ಒಂದಾದ ನಮ್ಮ ಸಂಘಟನೆಯ ಮುಖ್ಯ ಬೇಡಿಕೆಯಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮತ್ತು ಸವಲತ್ತುಗಳನ್ನು ಸಾರಿಗೆ ನೌಕರರಿಗೂ ಸಹ ವಿಸ್ತರಿಸುವುದಾಗಿ ನೀಡಿದ್ದ ಭರವಸೆಯನ್ನು ಕಾಲ ವಿಳಂಬವಿಲ್ಲದೆ ಕೂಡಲೆ ಜಾರಿ ಮಾಡಬೇಕು.
ಸಂಸ್ಥೆಯು 1996 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೆಸಿ ಸಂಘಗಳ ಮಾನ್ಯತೆ ಪ್ರಶ್ನೆಯನ್ನು ಪ್ರಜಾಪ್ರಭುತ್ವದನ್ವಯ ನಿರ್ಧರಿಸಬೇಕಿತ್ತು. ಆದರೆ, ಅಂದಿನಿಂದ ಇದುವರೆಗೂ ಚುನಾವಣೆ ಮಾಡದೆ ಕಾರ್ಮಿಕರ ಬಹುಮತ ಕಳೆದುಕೊಂಡಿರುವ ಸಂಘಕ್ಕೆ ಮಾನ್ಯತೆ ಮುಂದುವರಿಸುತ್ತಿರುವುದು ಕಾನೂನು ಬಾಹಿರವಾಗಿದೆ.
ಸಂಸ್ಥೆಯು 1996 ರಿಂದ ಕೈಗಾರಿಕಾ ವಿವಾದ ಕಾಯ್ದೆಯಡಿಯಲ್ಲಿ ಸಂಸ್ಥೆ ಮತ್ತು ಕಾರ್ಮಿಕರ ನಡುವೆ ಯಾವುದೇ ಒಪ್ಪಂದವಾಗದೆ ಏಕ ಪಕ್ಷೀಯವಾಗಿ ಸಂಸ್ಥೆ ಜಾರಿ ಮಾಡುತ್ತಿರುವ ವೇತನ ಪುನರ್ ವಿಮರ್ಶೆಗಳು ಕಾನೂನು ಬಾಹಿರವಾಗಿರುವ ಕಾರಣ ಸಂಸ್ಥೆಯು ಈ ಕೂಡಲೆ ಚುನಾವಣೆಯನ್ನು ನಡೆಸಿ, ಮಾನ್ಯತೆ ಪ್ರಶ್ನೆ ಇತ್ಯರ್ಥ ಮಾಡಬೇಕು.
ಸಾರಿಗೆ ನೌಕರರಿಗೆ ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರುವುದು. ಸಾರಿಗೆ ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಹಾಗೂ ಸಂಸ್ಥೆಯ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಪದ್ಧತಿಯನ್ನು ಈ ಕೂಡಲೇ ನಿಲ್ಲಿಸಿ, ಸಂಸ್ಥೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಸಗಿ ಸಿಬ್ಬಂದಿಗಳನ್ನು ಸಂಸ್ಥೆಯ ನೌಕರರೆಂದು ಪರಿಗಣಿಸಬೇಕು.