NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ₹6ಲಕ್ಷ ಮೌಲ್ಯದ ಆಭರಣಗಳಿದ್ದ ವ್ಯಾನಿಟಿ ಬ್ಯಾಗ್‌ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲನಾ ಸಿಬ್ಬಂದಿ

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ಪ್ರಯಾಣಿಕರು ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಬಂಗಾರದ ಸರಗಳಿದ್ದ ವ್ಯಾನಿಟಿ ಬ್ಯಾಗನ್ನು ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ಮೂರನೇ ಘಟಕದ ಚಾಲನಾ ಸಿಬ್ಬಂದಿಗಳು.

ಗುರುವಾರ ಬೆಳಗ್ಗೆ 11.30ರ ಸುಮಾರಿಗೆ ಘಟಕದ (KA-34 F-1175) ವಾಹನವು 310 BA (ಹರಗಿನ ಡೋಣಿ) ಮಾರ್ಗ ಮುಗಿಸಿಕೊಂಡು ನಗರ ಬಸ್ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರನ್ನು ಇಳಿಸಿ ಡ್ಯೂಟಿ ಪೂರ್ಣಗೊಂಡಿದ್ದರಿಂದ ಘಟಕಕ್ಕೆ ಬಸ್‌ ತೆಗೆದುಕೊಂಡು ಹೋಗುತ್ತಿದ್ದಾಗ ಪ್ರಯಾಣಿಕರು ಬಸ್ಸಿನಲ್ಲಿ ಬಿಟ್ಟು ಹೋಗಿರುವ ವ್ಯಾನಿಟಿ ಬ್ಯಾಗ್ ಸಿಕ್ಕಿದೆ.

ಅದನ್ನು ತೆಗೆದುಕೊಂಡು  ಏನಿದೆ ಎಂದು  ನಿರ್ವಾಹಕ ಚಂದ್ರಶೇಖರ್ ಆಚಾರ್ಯ (4005) ಅವರು ಚಾಲಕ ದೇವಪ್ಪ (453) ಅವರೊಂದಿಗೆ ನೋಡಿದಾಗ ಪ್ರಯಾಣಿಕರು ಬಸ್ಸಿನಲ್ಲಿ ಮರೆತು ಬಿಟ್ಟು ಹೋಗಿದ್ದ ಆ  ಬ್ಯಾಗ್‌ನಲ್ಲಿ ಚಿನ್ನದ ಸರ, ನೆಕ್ಲೆಸ್‌, ಕಿವಿಓಲೆಗಳಿರುವುದು ಕಂಡು ಬಂದಿದೆ.

ಈ ಇಬ್ಬರು ಚಾಲನಾ ಸಿಬ್ಬಂದಿಗಳು ಅದನ್ನು ಘಟಕಕ್ಕೆ ತಂದು ಘಟಕ ವ್ಯವಸ್ಥಾಪಕ ಹರಿಕೃಷ್ಣ  ಅವರ ಸಮ್ಮುಖದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಬ್ಯಾಗಲ್ಲಿ 6 ತೋಲ (60gm) ಬಂಗಾರ ಇರುವುದನ್ನು ಖಚಿತಪಡಿಸಿಕೊಂಡರು. ಅಲ್ಲದೆ ಘಟಕ ವ್ಯವಸ್ಥಾಪಕರು ಆ ಬ್ಯಾಗನ್ನು ಪರಿಶೀಲಿಸಿ, ಅದರಲ್ಲಿರುವ ಆಧಾರ್ ಕಾರ್ಡ್‌ನ ಫೋನ್ ನಂಬರ್‌ಗೆ ಕರೆ ಮಾಡಿ ವಾರಸುದಾರರಿಗೆ ವಿಷಯ ತಿಳಿಸಿದರು..

ಈ ವೇಳೆ ಚಿನ್ನದ ಒಡವೆಗಳನ್ನು ಕಳೆದುಕೊಂಡಿದ್ದ ಪ್ರಯಾಣಿಕರು ಗಾಬರಿ ಮತ್ತು ಭಯಗೊಂಡು ಎಲ್ಹೋಯಿತು ಎಂದು ಹುಡುಕಾಡುತ್ತಿದ್ದರು. ಅದೇ ಸಮಯಕ್ಕೆ ಘಟಕ ವ್ಯವಸ್ಥಾಪಕರು ಕರೆ ಮಾಡಿ ಬ್ಯಾಗ್‌ ಸಿಕ್ಕಿರುವ ಬಗ್ಗೆ ಹೇಳಿದ್ದರಿಂದ ತುಸು ನೆಮ್ಮದಿಗೊಂಡರು.

ಇನ್ನು ಘಟಕಕ್ಕೆ ಬಂದು ಬ್ಯಾಗನ್ನು ತೆಗೆದುಕೊಂಡು ಹೋಗಲು ಘಟಕ ವ್ಯವಸ್ಥಾಪಕ ಹರಿಕೃಷ್ಣ  ತಿಳಿಸಿದರು.  ಬ್ಯಾಗ್‌ ಕಳೆದುಕೊಂಡಿದ್ದವರು ಘಟಕಕ್ಕೆ ಬಂದಾಗ ವಾರಸುದಾರರ ಆಧಾರ್ ಕಾರ್ಡಿನ ಪುರಾವೆಯನ್ನು ಪರಿಶೀಲಿಸಿ ಘಟಕದ ಪಾರುಪತ್ತೆಗಾರರು, ಚಾಲಕ ದೇವಪ್ಪ, ನಿರ್ವಾಹಕ ಚಂದ್ರಶೇಖರ್ ಆಚಾರ್ಯ ಹಾಗೂ ಘಟಕದ ಸಿಬ್ಬಂದಿಗಳ ಸಮ್ಮುಖದಲ್ಲಿ ಬ್ಯಾಗನ್ನು ಬಳ್ಳಾರಿ ಮೂರನೇ ಘಟಕದಲ್ಲಿ ಮಧ್ಯಾಹ್ನ 12:30ರ ಸುಮಾರರಿಗೆ ವಾರಸುದಾರರಿಗೆ ಘಟಕ ವ್ಯವಸ್ಥಾಪಕ ಹರಿಕೃಷ್ಣ   ಮರಳಿಸಿದರು.

Advertisement

ಬಳಿಕ ಡಿಎಂ ಹರಿಕೃಷ್ಣ  ಮಾತನಾಡಿ, ತಮ್ಮ ಡಿಪೋ ಚಾಲನಾ ಸಿಬ್ಬಂದಿಗಳಾದ ಚಾಲಕ ದೇವಪ್ಪ, ನಿರ್ವಾಹಕ ಚಂದ್ರಶೇಖರ್ ಆಚಾರ್ಯ ಅವರ ಪ್ರಾಯಾಣಿಕತೆಯನ್ನು ಶ್ಲಾಘಿಸಿದ್ದು, ಅಲ್ಲದೆ ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತಂದು ಚಾಲನಾ ಸಿಬ್ಬಂದಿಗಳನ್ನು ಗೌರವಿಸಲಾಗುವುದು ಎಂದು ವಿಜಯಪಥಕ್ಕೆ ತಿಳಿಸಿದರು.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!