NWKRTC: ಶಿಗ್ಗಾಂವಿಯಲ್ಲಿ ಹೊಸ ಘಟಕ, ಚಾಲನಾ-ಮೆಕ್ಯಾನಿಕ್ ತರಬೇತಿ ಕೇಂದ್ರ ಲೋಕಾರ್ಣೆಗೊಳಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಶಿಗ್ಗಾಂವಿ (ಹಾವೇರಿ): ರಾಜ್ಯದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸುಮಾರು 5,800 ಹೊಸ ಬಸ್‌ಗಳನ್ನು ನೀಡಲಾಗುತ್ತಿದೆ. ಇದರ ಜತೆಯಲ್ಲಿ 9 ಸಾವಿರ ನೌಕರರನ್ನು ನೇಮಕ ಮಾಡಲಾಗಿದ್ದು, ಅನುಕಂಪದ ಆಧಾರದಲ್ಲಿ ಒಂದು ಸಾವಿರ ಸಿಬ್ಬಂದಿ ಸೇರಿಸಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪಟ್ಟಣದ ಗಂಗಿಭಾವಿ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಬಸ್ ಡಿಪೋ ಮತ್ತು ಚಾಲನಾ-ಮೆಕ್ಯಾನಿಕ್ ತರಬೇತಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ಮಾತನಾಡಿದರು.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಈಗಾಗಲೇ 300 ಬಸ್‌ಗಳು ಮಂಜೂರಾಗಿವೆ. ಸದ್ಯದಲ್ಲಿ ಹೊಸದಾಗಿ 400 ಹೊಸ ಬಸ್‌ಗಳನ್ನು ಮಂಜೂರಾತಿ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಜ್ಯದ ಹಲವು ಬಸ್ ನಿಲ್ದಾಣಗಳು, ರಸ್ತೆಯಿಂದ ಕೆಳಗಿವೆ. ಇಂಥ ನಿಲ್ದಾಣಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಶಿಗ್ಗಾಂವಿ ಬಳಿಯ ಹುಲಗೂರ, ತಡಸಕ್ಕೆ ನೂತನ ಬಸ್ ನಿಲ್ದಾಣ ಮತ್ತು ಕಾಶಿಪೀಠದ ವಿಶ್ವನಾಥ ದೇವಸ್ಥಾನಕ್ಕೆ ಅನುದಾನ ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ಭರಮಗೌಡ ರಾಜು ಕಾಗೆ ಮಾತನಾಡಿ, ಸರ್ಕಾರ ಸದ್ಯದಲ್ಲಿ 700 ಹೊಸ ಬಸ್ ನೀಡುತ್ತಿದ್ದು, ಹೊಸ ಬಸ್ ಘಟಕಗಳಿಗೆ ತಲಾ 50 ಬಸ್ ನೀಡಲಾಗುವುದು. ಶಿಗ್ಗಾವಿಯಲ್ಲಿ ನೌಕರರ ಸಮಸ್ಯೆಗಳಿದ್ದು, ಈ ಬಗ್ಗೆ ಸಭೆ ನಡೆಸಿ ಚರ್ಚಿಸಿದ್ದೇವೆ. ಹೊಸ ನೇಮಕಾತಿಗೂ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಮಾತನಾಡಿ, ಶಕ್ತಿ ಯೋಜನೆಯು ಗಿನ್ನಿಸ್ ದಾಖಲೆ ಮಾಡಿದೆ. ನಮ್ಮ ರಾಜ್ಯದಲ್ಲಿ ಯಶಸ್ವಿಯಾದ ಈ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳು ಜಾರಿಗೆ ತಂದಿವೆ. ಇದಕ್ಕಿಂತ್ತ ಮುಖ್ಯವಾಗಿ ಈ ಯೋಜನೆಯಿಂದ ಪ್ರೇರೇಪಿತಗೊಂಡ ಅಮೆರಿಕದ ನ್ಯೂಯಾರ್ಕ್‌ಲ್ಲೂ ಸಹ ಜಾರಿಗೊಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಶಿಗ್ಗಾವಿ ಕ್ಷೇತ್ರದ ಹುಲಗೂರ ಹಾಗೂ ತಡಸ ಗ್ರಾಮಗಳು, ಪಟ್ಟಣ ಪಂಚಾಯಿತಿ ಅಗಲಿವೆ. ಈ ಗ್ರಾಮಗಳಲ್ಲಿನ ಬಸ್ ನಿಲ್ದಾಣ. ಸವಣೂರ ಬಸ್ ನಿಲ್ದಾಣ ಸೇರಿದಂತೆ ಗ್ರಾಮೀಣ ಹಾಗೂ ನಗರದ ಪ್ರದೇಶದಲ್ಲಿ ಬಸ್ ನಿಲ್ದಾಣಗಳು ಶಿಥಿಲಗೊಂಡಿವೆ. ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ವಾಕರಸಾಸಂ ಜಿಲ್ಲಾ ನಿಯಂತ್ರಣಾ ಧಿಕಾರಿ ಜಿ. ವಿಜಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ, ಕೇಂದ್ರ ಕಚೇರಿಯ ಶಾಖಾ ಮುಖ್ಯಸ್ಥರು, ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ ಹಾಗೂ ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಪಾಟೀಲ ಸಮಾರಂಭದ ನೇತೃತ್ವದ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸೋಮಣ್ಣ ಬೇವಿನಮರದ, ಹಾವೇರಿ ಜಿಲ್ಲಾಧಿಕಾರಿ ಡಾ.ಬಿ.ವಿಜಯಮಹಾಂತೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹಾಗೂ ಅಂದಾಜು 1500 ಸಾರ್ವಜನಿಕರು ಭಾಗವಹಿಸಿದ್ದರು.
ಕನಸೊಂದು ಈಗ ನನಸಾಗಿದೆ-ಸಂಸದ ಬರವರಾಜ ಬೊಮ್ಮಾಯಿ: ಶಿಗ್ಗಾವಿ ಕ್ಷೇತ್ರದ ಪ್ರಗತಿಯಲ್ಲಿ ನೂತನ ಬಸ್ ಘಟಕ ಹಾಗೂ ವಾಹನ ಚಾಲನಾ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಸ್ಥಾಪನೆ ಮಹತ್ವದ ಹೆಜ್ಜೆಯಾಗಿದ್ದು, ನನ್ನ ಕನಸೊಂದು ಈಗ ನನಸಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಶಿಗ್ಗಾಂವಿ ತಾಲೂಕಿಗೊಂದು ಸಾರಿಗೆ ಇಲಾಖೆಯ ನೂತನ ಬಸ್ ಘಟಕ ಹಾಗೂ ವಾಹನ ಚಾಲನಾ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಅತ್ಯಂತ ಅಗತ್ಯ ಎಂದು ಭಾವಿಸಿ, ನಾನು ಸಿಎಂ ಆಗಿದ್ದ ಅವಧಿಯಲ್ಲಿ 28 ಕೋಟಿ ರೂ. ಬಿಡುಗಡೆಗೊಳಿಸಿದ ಕಾರಣ, ಇದೀಗ ಆ ಘಟಕ ಲೋಕಾರ್ಪಣೆಯಾಗಿದೆ ಆ ಮೂಲಕ ಶಿಗ್ಗಾಂವ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ನಾನು ಕಂಡ ಕನಸು ಇಂದು ಬಹುತೇಕ ಸಾಕಾರಗೊಂಡಿದೆ ಎಂದಿದ್ದಾರೆ.
ಈ ಘಟಕ ಲೋಕಾರ್ಪಣೆಯಾದ ಕಾರಣದಿಂದ, ಕ್ಷೇತ್ರದ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳಿಗೆ ಸುಗಮ ಬಸ್ ಸಂಚಾರದ ಅನುಕೂಲವನ್ನು ಒದಗಿಸಲಿದೆ. ವಾಹನ ಚಾಲನಾ ತರಬೇತಿ ಕೇಂದ್ರದ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ದೊಡ್ಡ ಮಟ್ಟದ ನೆರವು ನೀಡಲಿದೆ. ಶಿಗ್ಗಾಂವಿ ಕ್ಷೇತ್ರದ ಪ್ರಗತಿಯಲ್ಲಿ ಇದೊಂದು ಮಹತ್ವದ ಹೆಜ್ಜೆ. ಈ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿದಾಗ ಮಾತ್ರ ನನ್ನ ಶ್ರಮ ಸಾರ್ಥಕ ಎಂದು ತಿಳಿಸಿದ್ದಾರೆ.
Related









