NEWSನಮ್ಮರಾಜ್ಯಶಿಕ್ಷಣ

ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮಾದರಿ ಶಾಲೆ: ಸಚಿವ ಮುನಿಯಪ್ಪ

ವಿಜಯಪಥ ಸಮಗ್ರ ಸುದ್ದಿ
  • 1.5 ಕೋಟಿ ಸಿ.ಎಸ್.ಆರ್ ವೆಚ್ಚದಲ್ಲಿ ನಿರ್ಮಿಸಿರುವ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣ ಉದ್ಘಾಟನೆ

ಬೆಂಗಳೂರು ಗ್ರಾಮಾಂತರ: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಒಂದು ಮಾದರಿ ಶಾಲೆ ನಿರ್ಮಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಬ್ರಿಗೇಡ್ ಫೌಂಡೇಷನ್ ವತಿಯಿಂದ ಸಿ.ಎಸ್.ಆರ್ ಅನುದಾನದಡಿ ನಿರ್ಮಿಸಿರುವ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

2023 ಅಕ್ಟೋಬರ್ 02 ರ ಗಾಂಧಿ ಜಯಂತಿ ದಿನದಂದು ಶಾಲೆಗಳ ನವೀಕರಣ ಗುಣಮಟ್ಟದ ವಿಧ್ಯಾಭ್ಯಾಸಕ್ಕೆ ಒತ್ತು ನೀಡಲು ನಮ್ಮ ಸರ್ಕಾರವು ಎಲ್ಲಾ ಖಾಸಗಿ ಸಂಸ್ಥೆಗಳೊಂದಿಗೆ ಒಡಗೂಡಿ ಸಿಎಸ್ಆರ್ ಅನುದಾನದಡಿ ಶಾಲೆಗಳ ಅಭಿವೃದ್ಧಿಗೆ ತೀರ್ಮಾನ ಕೈಗೊಳ್ಳಲಾಯಿತು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ ಮಾಡುವುದು ಸರ್ಕಾರದ ಆಶಯ ಎಂದರು.

ಎಲ್.ಕೆ.ಜಿ ಯಿಂದ ಪಿಯುಸಿ ವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣವನ್ನು ಬಡವರು, ರೈತರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ನೀಡಬೇಕು ಎಂಬುದು ನಮ್ಮ ತೀರ್ಮಾನ. ಬಹುತೇಕ ಕಂಪನಿಗಳು ಸಿಎಸ್ಆರ್ ಅನುದಾನದಡಿ ಕಾನ್ವೆಂಟ್ ಮಾದರಿ ಶಾಲೆ ಅಭಿವೃದ್ಧಿ ಪಡಿಸಲು ಪಣ ತೊಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಿ ದೇಶ ಸೇವೆಯ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಕಟ್ಟಕಡೆಯ ವಿದ್ಯಾರ್ಥಿಗೂ ಸಮಾನತೆ ಸಿಗಬೇಕು. ಜಗತ್ತಿನ ಬಲಿಷ್ಠ ರಾಷ್ಟ್ರಗಳ ಜೊತೆ ಭಾರತ ಕೊಂಡೊಯ್ಯಲು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಹಾಗೇ ನಮ್ಮ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಾಭಿವೃದ್ದಿ ಯೋಜನಾ ಪ್ರಾಧಿಕಾರದವರು ಸರ್ಕಾರಿ ಶಾಲೆಗಳ ಸುಧಾರಣೆಗೆ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.

ಭಾರತರತ್ನ ಪಡೆದಿರುವ ನಮ್ಮ ಸರ್.ಎಂ ವಿಶ್ವೇಶ್ವರಯ್ಯ ಅವರು ಯಾವ ರೀತಿ ಹಂತ ಹಂತವಾಗಿ ಬೆಳೆದು ಇಡೀ ಜಗತ್ತಿಗೆ ಮಾದರಿಯಾದರು, ಅವರು ಶ್ರೇಷ್ಠ ಇಂಜಿನಿಯರ್, ಅವರ ಹೆಸರನ್ನು ಈ ಸಭಾಂಗಣಕ್ಕೆ ಇಟ್ಟಿರುವುದು ತುಂಬಾ ಸಂತೋಷವಾಗಿದೆ. ಹಾಗಾಗಿ ಇವರ ಆದರ್ಶಗಳು ಮತ್ತು ನಡೆದ ಹಾದಿಯನ್ನು ಅರಿತು ವಿದ್ಯಾರ್ಥಿಗಳು ಉನ್ನತ ಮಟ್ಟದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ಗಾಂಧಿಯವರು ಹೇಳಿರುವ ಮಾತನ್ನು ವಿದ್ಯಾರ್ಥಿಗಳು ಮನದ್ದಟ್ಟು ಮಾಡಿಕೊಳ್ಳಬೇಕು. ಮಕ್ಕಳಿಗೆ ಮೊದಲ ಗುರು ತಂದೆ ತಾಯಿ ನಂತರ ಶಿಕ್ಷಕರು, ಆದ್ದರಿಂದ ಶಿಕ್ಷಕರು ಹೇಳುವ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಇನ್ಫೋಸಿಸ್ ಸಂಸ್ಥೆಯವರು150 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳ ನವೀಕರಣ ಕಾರ್ಯವನ್ನು ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ನೀಡುತ್ತಿರುವ ಎಲ್ಲಾ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗೆ ಕಡಿಮೆ ಅಲ್ಲ ಎನ್ನುವ ರೀತಿಯಲ್ಲಿ ಮುನ್ನುಗ್ಗಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬೈಲಾಂಜಿನಪ್ಪ.ಪಿ, ಬ್ರಿಗೇಡ್ ಫೌಂಡೇಷನ್ ಸಿ.ಇ.ಒ ಶಿವಯೋಗಿ ಸಿ ಕಳಸದ, ಬ್ರಿಗೇಡ್ ನಾರ್ಥ್ ಪ್ರಾಜೆಕ್ಟ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಬಾಲಸುಬ್ರಮಣ್ಯನ್ ಎಂ.ಎನ್, ಬಯಪ ಅಧ್ಯಕ್ಷರಾದ ವಿ.ಶಾಂತಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಸಿ.ಜಗನ್ನಾಥ್, ವಿಶ್ವನಾಥಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವೆಂಕಟಮ್ಮ ಸೇರಿದಂತೆ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!