CrimeNEWSಬೆಂಗಳೂರು

ಮಾಡಾಳು ವಿರೂಪಾಕ್ಷಪ್ಪ ಲಂಚ ಪ್ರಕರಣ ಮರು ತನಿಖೆಗೆ ಆದೇಶಿಸಿ: ಆಮ್ ಆದ್ಮಿ ಪಕ್ಷ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲು ಚೆನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಕೆ. ಮಾಡಾಳು ವಿರೂಪಾಕ್ಷಪ್ಪ ಅವರ ವಿರುದ್ಧದ ಲಂಚ ಪ್ರಕರಣ ಪ್ರಮುಖ ಕಾರಣವಾಗಿದ್ದು, ಕ್ಷುಲ್ಲಕ ಲೋಪದಿಂದ ಅವರ ವಿರುದ್ಧದ ಪ್ರಕರಣ ರದ್ದಾಗಿದ್ದು ಮರು ತನಿಖೆಗೆ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತಕ್ಕೆ ಮರುತನಿಖೆಗೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆಗ್ರಹಿಸಿದ್ದಾರೆ.

ನಗರದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರ ಪರಮಾಪ್ತರಾಗಿದ್ದ ಕೆ. ಮಾಡಾಳು ವಿರೂಪಾಕ್ಷಪ್ಪ ಅವರು ಶಾಸಕರು ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರ ಮೇಲೆ ನಡೆದ ಲೋಕಾಯುಕ್ತ ದಾಳಿ ಇಡೀ ದೇಶದ ಗಮನ ಸೆಳೆದಿತ್ತು, ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಈ ಘಟನೆ ಆನಂತರ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಪ್ರಮುಖ ಕಾರಣವಾಯಿತು ಎಂದು ಜಗದೀಶ್ ವಿ. ಸದಂ ಹೇಳಿದರು.

ಸುಗಂಧ ದ್ರವ್ಯಕ್ಕೆ ಸಂಬಂಧಪಟ್ಟ ಕಚ್ಛಾ ವಸ್ತುಗಳನ್ನು ಮಾರಾಟ ಮಾಡಲು ಗುತ್ತಿಗೆ ನೀಡುವ ವಿಚಾರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಲಂಚ ಕೇಳಿದ್ದಾಗಿ ಶ್ರೇಯಸ್ ಕಶ್ಯಪ್ ಎನ್ನುವವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರು ತಂದೆಯ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

40 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸಲಾಗಿತ್ತು. ತದ ನಂತರ ಮಾಡಾಳ್ ವಿರೂಪಾಕ್ಷಪ್ಪನವರ ಮನೆ ಮೇಲೆ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಕೂಡ 8 ಕೋಟಿ ರೂಪಾಯಿ ಹಣ ಪತ್ತೆಯಾಗುತ್ತದೆ. ಆದರೆ ಅಡಿಕೆ ಮಾರಿದ ಹಣ ಎಂದು ಅವರು ಸಮಜಾಯಿಷಿ ನೀಡಿದ್ದರು. ಕೊನೆಗೆ ಅವರಿಗೆ ಬಿಜೆಪಿ ಟಿಕೆಟ್ ಕೊಡದೆ, ಅವರ ಮಗ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಸೋತರು.

ಇಷ್ಟೆಲ್ಲಾ ದೊಡ್ಡ ಹಗರಣ ಆದ ಬಳಿಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ನಾವು ಕೂಡ ನಿರೀಕ್ಷೆ ಮಾಡಿದ್ದೆವು. ಆದರೆ, ಈ ಪ್ರಕರಣದಲ್ಲಿ ಸ್ಪೀಕರ್ ಪ್ರಾಸಿಕ್ಯೂಷನ್ ಅನುಮತಿ ಪಡೆದಿರಲಿಲ್ಲ ಎಂದು ಕಾರಣ ನೀಡಿ ಮೂರು ದಿನಗಳ ಹಿಂದೆ ಹೈಕೋರ್ಟ್ ಪ್ರಕರಣ ವಜಾ ಮಾಡಿದೆ ಎಂದು ಜಗದೀಶ್ ವಿ. ಸದಂ ಹೇಳಿದರು.

ಪ್ರಾಸಿಕ್ಯೂಷನ್ ಅನುಮತಿ ಪಡೆದು ಪ್ರಕರಣ ತನಿಖೆ ಮಾಡಬೇಕು ಎನ್ನುವ ಕನಿಷ್ಠ ಜ್ಞಾನ ಅಂದಿನ ಸರ್ಕಾರಕ್ಕೆ ಇರಲಿಲ್ಲವಾ? ಪ್ರಾಸಿಕ್ಯೂಷನ್ ಅನುಮತಿ ನೀಡದೇ ಯಾಕೆ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದೆ? ಇಷ್ಟೊಂದು ದೊಡ್ಡ ಪ್ರಕರಣ ವಜಾ ಆಗಿರುವುದು ನೀಚ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಜಗದೀಶ್ ವಿ. ಸದಂ ಆಕ್ರೋಶ ವ್ಯಕ್ತಪಡಿಸಿದರು.

ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ, ಬಿಜೆಪಿ ವಿಪಕ್ಷವಾಗಿದೆ. ಎರಡೂ ಪಕ್ಷಗಳು ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ ಎಂದು ಮಾಧ್ಯಮಗಳೇ ವರದಿ ಮಾಡಿವೆ. ಈ ಪ್ರಕರಣ ಗಮನಿಸಿದರೆ ಅದು ನಿಜ ಅನಿಸುತ್ತದೆ. ಚುನಾವಣೆಗೆ ಮೊದಲು ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ಜೊತೆ ಹೋರಾಟ ಮಾಡಿತ್ತು, ಆದರೆ ಇಂದು ಪ್ರಕರಣದ ತನಿಖೆಗೆ ಅನುಮತಿ ನೀಡದೆ ಹೊಂದಾಣಿಕೆ ರಾಜಕಾರಣ ಮಾಡ್ತಿದ್ದಾರೆ. ಕೂಡಲೇ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಾಸಿಕ್ಯೂಷನ್ ಅನುಮತಿ ನೀಡಿ ಈ ಪ್ರಕರಣವನ್ನು ಮರು ತನಿಖೆಗೆ ಆದೇಶ ನೀಡಬೇಕು ಎಂದು ಜಗದೀಶ್ ವಿ. ಸದಂ ಒತ್ತಾಯಿಸಿದರು.

ಕೆಎಎಸ್‌ ಅಧಿಕಾರಿಯಾಗಲೂ ಅರ್ಹತೆಯಿಲ್ಲದ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್‌ ಮಾಡಾಳು ಅವರು ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿಯಾಗಿದ್ದು ಹೇಗೆ? ತಂದೆಯ ಪ್ರಭಾವದಿಂದ ಉನ್ನತ ಹುದ್ದೆ ಪಡೆದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಶಾಂತ್‌ ಮಾಡಾಳು ಈ ಹುದ್ದೆ ಹೇಗೆ ಪಡೆದರು ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಜಗದೀಶ್ ವಿ. ಸದಂ ಒತ್ತಾಯಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಯುವ ಘಟಕದ ಅಧ್ಯಕ್ಷ, ವಕೀಲರಾದ ಲೋಹಿತ್ ಕುಮಾರ್ ಮಾತನಾಡಿ, ಚುನಾವಣೆ ಘೋಷಣೆಯಾದ ಬಳಿಕ ನಡೆದ ಅತಿ ದೊಡ್ಡ ಹಗರಣ ಇದು. ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಗೆ ಬಂದರೂ ಇದರ ಬಗ್ಗೆ ಅಪ್ಪಿ ತಪ್ಪಿಯೂ ಮಾತನಾಡಲಿಲ್ಲ ಎಂದರು.

ಈ ಪ್ರಕರಣ ದಾಖಲಾದಾಗ ಪ್ರಭುಲಿಂಗ ನಾವದಗಿ ಅವರು ಸರ್ಕಾರದ ಪ್ರತಿನಿಧಿಯಾಗಿದ್ದರು, ಬಿಎಸ್ ಯಡಿಯೂರಪ್ಪನವರಿಗೂ ಅವರೇ ಅಡ್ವೋಕೇಟ್ ಆಗಿದ್ದರು. ಪ್ರಕರಣ ದಾಖಲಾದಾಗ ಮಾಡಾಳ್‌ ವಿರೂಪಾಕ್ಷಪ್ಪ ಅವರ ವಿರುದ್ಧ ವಾದ ಮಂಡಿಸಿದ್ದ ಇದೇ ವಕೀಲರು ಇಂದು ಆರೋಪಿ ಪರ ವಾದ ಮಂಡಿಸಿ ಗೆದ್ದಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಕೈಗನ್ನಡಿಯಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಕೂಡ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಿಜೆಪಿ ನಾಯಕರ ಮೇಲೆ ಹೆಚ್ಚಿನ ಭ್ರಷ್ಟಾಚಾರ ಪ್ರಕರಣಗಳಿವೆ ಎರಡೂ ಪಕ್ಷದ ನಾಯಕರು ಕೂಡ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದರು. ಸ್ಪೀಕರ್ ಯುಟಿ ಖಾದರ್ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ಮರು ತನಿಖೆಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ದೆಹಲಿಯಲ್ಲಿ ನಮ್ಮ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ಕಳುಹಿಸಲು ಸಂಚು ಮಾಡಲಾಗುತ್ತಿದೆ. ಆದರೆ ಇಲ್ಲಿ ಎಲ್ಲಾ ಆಧಾರಗಳು ಇದ್ದರೂ, 8 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದರೂ ಕೂಡ ಈ ಪ್ರಕರಣವನ್ನು ಬಿಜೆಪಿಯವರು ಮುಚ್ಚಿ ಹಾಕಿದ್ದಾರೆ. ಇದನ್ನು ಜನ ಗಮನಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಜನ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಹೇಳಿದರು.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ