NEWSನಮ್ಮರಾಜ್ಯರಾಜಕೀಯ

ಅಭಿವೃದ್ಧಿಗೆ ಹಣ ಇಲ್ಲ ಅಂತ ಸುಳ್ಳು ಎರಚುವ ಬಿಜೆಪಿಗೆ ನಮ್ಮ ಸವಾಲ್‌: ಸಿಎಂ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ದಿನ 1,146 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಎರಚುವ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ನಮ್ಮ ಸರ್ಕಾರದ ಸವಾಲು ಎಂದು ಸವಾಲು ಹಾಕಿದ್ದಾರೆ.

ಅವರು ಇಂದು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ಕಾವೇರಿ ಅಭಿವೃದ್ಧಿ ನಿಗಮ ಒಂದರಲ್ಲೇ ಎರಡು ವರ್ಷದಲ್ಲಿ 560 ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಮದ್ದೂರಿನಲ್ಲಿ ಏನು ಮಾಡಿದೆ ಎನ್ನುವುದನ್ನು ಜನತೆಗೆ ತೋರಿಸಿ ಎಂದು ಗುಡುಗಿದರು.

ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಮಂಡ್ಯ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಚುಕ್ತಾ ಮಾಡಿದ್ದು ನಾವು, ಕಾರ್ಖಾನೆಯ ಪುನಶ್ಚೇತನಕ್ಕೆ 52 ಕೋಟಿ ರೂಪಾಯಿ ಕೊಟ್ಟಿದ್ದು ನಾವು.‌ ಹಾಲು ಉತ್ಪಾದಕರ ಸಂಘದ ಮನವಿಗೆ ಸ್ಪಂದಿಸಿ ಹಾಲು ಉತ್ಪಾದಕರಿಗೆ ಲೀಟರ್‌ಗೆ 5 ರೂ. ಸಹಾಯಧನ‌ ಒದಗಿಸಿದ್ದು ನಾವು. ಈಗ ಮತ್ತೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 10 ಕೋಟಿ ರೂ. ಕೊಟ್ಟಿರುವುದು ನಮ್ಮ ಸರ್ಕಾರ. ಮಂಡ್ಯ ಕೃಷಿ ವಿಶ್ವವಿದ್ಯಾಲಯ ಆರಂಭಿಸಿ, ಅಗತ್ಯ ಅನುದಾನ‌ ಕೊಟ್ಟಿರುವುದು ನಾವು. ಇದು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರದ ಬದ್ಧತೆ ಎಂದರು.

ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳಿಂದಾಗಿ ರಾಜ್ಯದ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿ, ರಾಜ್ಯದ ಆರ್ಥಿಕತೆಗೆ ಶಕ್ತಿ ಬಂದಿದೆ. ಪರಿಣಾಮ ಇಡೀ ದೇಶದಲ್ಲಿ ರಾಜ್ಯದ ತಲಾ ಆದಾಯ ನಂಬರ್ ಒನ್ ಆಗಿದೆ. ಮಂಡ್ಯ ನಗರದಲ್ಲಿ 100 ಅಡಿ ರಸ್ತೆ ಮಾಡಲು ಶಾಸಕ ಉದಯ್ ಅವರ ಬೇಡಿಕೆಗೆ ನಮ್ಮ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶಾಸಕ‌ ಉದಯ್ ಅವರದ್ದು ಕಡಿಮೆ ಮಾತು, ಹೆಚ್ಚು ಕೆಲಸ ಮಾಡುತ್ತಾರೆ ಎಂದು ಹೇಳಿದರು.

ರಾಜ್ಯಕ್ಕೆ ಕೊಡಬೇಕಾದಷ್ಟು ಗೊಬ್ಬರ ಕೊಡದೆ ಕೇಂದ್ರ ಸರ್ಕಾರ ರಾಜ್ಯದ ರೈತರ ವಿರೋಧಿಯಾಗಿದೆ. ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಅಗತ್ಯ ಗೊಬ್ಬರ ಸರಬರಾಜು ಮಾಡುವಂತೆ ಒತ್ತಾಯಿಸಿ ಒಂದು ವಾರ ಕಳೆದರೂ ಇದುವರೆಗೂ ಕೊಟ್ಟಿಲ್ಲ. ಬಿಜೆಪಿ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಕೇಂದ್ರದ ಜತೆ ಮಾತನಾಡಿ ಗೊಬ್ಬರ ಕೊಡಿಸಲಿ ಎಂದರು.

Megha
the authorMegha

Leave a Reply

error: Content is protected !!