ಬಂಟ್ವಾಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಫುಟ್‌ಬೋರ್ಡ್ ಮೇಲೆ ಜನರು ಪ್ರಯಾಣಿಸುತ್ತಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಚಾಲಕನಿಗೆ 500 ರೂ. ದಂಡ ಹಾಕಿದ್ದಾರೆ.
ಸಂಚಾರಿ ಪೊಲೀಸರು ಅಥವಾ ಆರ್‌ಟಿಒ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ. ಆದರೆ, ಈ ದಂಡವನ್ನು ಚಾಲನಾ ಸಿಬ್ಬಂದಿಗೆ ಹಾಕುವ ಬದಲಿಗೆ ಬಸ್ ಯಾವ ಘಟಕಕ್ಕೆ ಸೇರುತ್ತದೋ ಆ ಘಟಕದ ವ್ಯವಸ್ಥಾಪಕರಿಗೆ ಹಾಕಬೇಕಿತ್ತು.
ಕಾರಣ ಚಾಲನಾ ಸಿಬ್ಬಂದಿ ಬಸ್‌ನ ಸೀಟಿನ ಸಾಮರ್ಥ್ಯ (Capacity)ದಷ್ಟು ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿದಕೂಡಲೇ ಬಸ್‌ಗೆ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಹೋದರೆ ಬಸ್‌ಗೆ ಕಾಯುತ್ತಿರುವ ಸಾರ್ವಜನಿಕರು ಡಿಪೋ ಅಧಿಕಾರಿಗಳಿಗೋ ಅಥವಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೋ ಇಂತ ಬಸ್ ನಿಲ್ಲಿಸದೆ ಹೋಗಿದೆ ಎಂದು ದೂರು ನೀಡಿದ ಕೂಡಲೇ ಚಾಲನಾ ಸಿಬ್ಬಂದಿಯನ್ನು ಕಾರಣ ಕೇಳದೆ ಅಮಾನತು ಮಾಡುತ್ತಾರೆ.
ಹೀಗಾಗಿ ರಾಜ್ಯದಲ್ಲಿ ಸಾಮಾನ್ಯವಾಗಿ ಎಲ್ಲ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳು ಸೀಟಿನ ಸಾಮರ್ಥ್ಯ ಮೀರಿ ಜನರನ್ನು ತುಂಬಿಕೊಂಡು ಸಾಗುತ್ತಿವೆ. ಇದಕ್ಕೆ ನೇರವಾಗಿ ಡಿಪೋದಲ್ಲಿರುವ ಅಧಿಕಾರಿಗಳು ಜತೆಗೆ ಸಾರಿಗೆ ನಿಗಮಗಳ ಎಂಡಿಗಳು ಹಾಗೂ ಡಿಸಿಗಳು ಕಾರಣರಾಗುತ್ತಾರೆ. ಆದ್ದರಿಂದ ಈ ರೀತಿ ಬಸ್ ಫುಟ್‌ಬೋರ್ಡ್ ಮೇಲೆ ಜನರು ಪ್ರಯಾಣಿಸುತ್ತಿದ್ದಾರೆ ಎಂದು ತಿಳಿದ ಕೂಡಲೇ ಸಂಚಾರಿ ಪೊಲೀಸರು ಈ ಅಧಿಕಾರಿಗಳ ಹೆಸರಿನಲ್ಲಿ ದಂಡದ ರಶೀದಿ ಹರಿಯಬೇಕು.
ಇಲ್ಲಿ ಬಂಟ್ವಾಳ ಸಂಚಾರಿ ಪೊಲೀಸರು ಅವರ ಕೆಲಸ ಅವರು ಮಾಡಿ 500 ರೂ. ದಂಡ ಹಾಕಿದ್ದಾರೆ. ಅಂದರೆ ಫುಟ್‌ಬೋರ್ಡ್ ಮೇಲೆ ಪ್ರಯಾಣಿಕರು ನಿಂತು ಪ್ರಯಾಣಿಸಿರುತ್ತಾರೆ ಎಂದು ಈ ರೀತಿ ದಂಡ ಹಾಕಿದ್ದಾರೆ. ಆದರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ ಅದಕ್ಕೆಲ್ಲ ನೀವೆ ಹೊಣೆಗಾರರು ನೀವು ಫುಟ್‌ಬೋರ್ಡ್ ಮೇಲೆ ಜನರನ್ನು ನಿಲ್ಲಿಸಿ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಡಿ ಎಂದು ಚಾಲನಾ ಸಿಬ್ಬಂದಿಗೆ ಬುದ್ಧಿವಾದ ಹೇಳುತ್ತಾರೆ.
ಆದರೆ, ಅದೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಹೋದರೆ ಬಸ್ ನಿಲ್ಲಿಸಿಲ್ಲ ನಮ್ಮನ್ನು ಹತ್ತಿಸಿಕೊಂಡಿಲ್ಲ ಎಂದು ಅದೇ ಪ್ರಯಾಣಿಕರು ದೂರು ನೀಡುತ್ತಾರೆ. ಆ ಕೂಡಲೇ ಅಧಿಕಾರಿಗಳು ಚಾಲಕರು ಮತ್ತು ನಿರ್ವಾಹಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಆಮಾನತು ಮಾಡುತ್ತಾರೆ.
ಇಲ್ಲಿ ಸಾರಿಗೆ ನಿಗಮದ ಅಧಿಕಾರಿಗಳು ಪ್ರಯಾಣಿಕರೆ ದೇವರು, ಅವರೇ ನಮ್ಮ ಸಂಸ್ಥೆಯ ಹಣಕಾಸು ಸಚಿವರು ಎನ್ನುತ್ತಾರೆ. ಇತ್ತ ಆ ದೇವರುಗಳನ್ನು ಹತ್ತಿಸಿಕೊಂಡರು ತಪ್ಪು, ಹತ್ತಿಸಿಕೊಳ್ಳದಿದ್ದರೂ ತಪ್ಪು ಎಂದು ಈ ಎರಡಕ್ಕೂ ಚಾಲಕರು ಮತ್ತು ನಿರ್ವಾಹಕರಿಗೆ ಶಿಕ್ಷೆ ನೀಡುತ್ತಾರೆ. ಈ ಸಮಸ್ಯೆಯ ಸುಳಿಯಿಂದ ಹೊರಬರುವುದಕ್ಕೆ ಚಾಲನಾ ಸಿಬ್ಬಂದಿ ಮಾತ್ರ ಒದ್ದಾಡುತ್ತಿದ್ದಾರೆ. ಆದರೂ ಪರಿಹಾರ ಈವರೆಗೂ ಸಿಕ್ಕಿಲ್ಲ.
ಅಂದರೆ ಇಲ್ಲಿ ಅಧಿಕಾರಿಗಳಿಗೆ ಪ್ರಯಾಣಿಕರೆ ದೇವರಾದರೆ ಚಾಲನಾ ಸಿಬ್ಬಂದಿಗೆ ಏನಾಗಿದ್ದಾರೆ ಕೆಲಸ ಕಸಿಯುವ ಶತ್ರುವಾಗುತ್ತಿದ್ದಾರೆಯೇ? ಪ್ರಯಾಣಿಕರು ಚಾಲನಾ ಸಿಬ್ಬಂದಿಗೂ ದೇವರೆ. ಆದರೆ ಆ ದೇವರುಗಳ ಎದುರಲ್ಲಿ ಚಾಲನಾ ಸಿಬ್ಬಂದಿಗಳನ್ನು ಮಾತ್ರ ನೀವು ಮರೆಯಲ್ಲಿ ನಿಂತು ದೆವ್ವದ ರೀತಿ ಕಾಣುವಂತೆ ಬಿಂಬಿಸುತ್ತಿದೀರಿ.
ಹೀಗಾಗಿ ಇಲ್ಲಿ ಯಾರು ದೇವರು ಯಾವ ದೆವ್ವಗಳು ಎಂಬ ಪ್ರಶ್ನೆಗೆ ಈವರೆಗೂ ಸಮಂಜಸವಾದ ಉತ್ತರ ಪ್ರಯಾಣಿಕರಿಗೂ ಸಿಕ್ಕಲ್ಲ, ನಿಗಮದ ಚಾಲನಾ ಸಿಬ್ಬಂದಿಗಳಿಗೂ ಸಿಕ್ಕಿಲ್ಲ. ಆದ್ದರಿಂದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ನಾಲ್ಕು ನಿಗಮದ ಎಂಡಿಗಳು ಈ ಬಗ್ಗೆ ಸೂಕ್ತ ನಿರ್ದೇಶನವನ್ನು ಸಂಸ್ಥೆಯ ಅಧಿಕಾರಿಗಳಿಗೆ ಮತ್ತು ಆರ್‌ಟಿಒ, ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ನೀಡಬೇಕು ಎಂದು ನೊಂದ ಚಾಲನಾ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.