ಪಿರಿಯಾಪಟ್ಟಣ : ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಗುರುವಾರ ಪಿರಿಯಾಪಟ್ಟಣದ ತಮ್ಮ ಕಚೇರಿ ಬಳಿ ವಿಜಯ್ ಕುಮಾರ್ ದೂರುದಾರ ನಟೇಶ್ ಎಂಬುವರಿಂದ ₹30 ಸಾವಿರ ಹಣವನ್ನು ಲಂಚವಾಗಿ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಖೆಡ್ಡಕ್ಕೆ ಕೆಡವಿದ್ದಾರೆ.
ನಟೇಶ್ ಎಂಬುವರ ಬಿಲ್ ಪಾಸ್ ಮಾಡುವ ಸಲುವಾಗಿ ಅವರಿಂದ ಪಡೆದಿದ್ದ ಚೆಕ್ ಹಿಂತಿರುಗಿಸುವ ವೇಳೆ 30 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ ವಿಜಯ್. ಈ ಸಂಬಂಧ ನಟೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ಗುರುವಾರ ಪಿರಿಯಾಪಟ್ಟಣದ ತಮ್ಮ ಕಚೇರಿ ಬಳಿ ವಿಜಯ್ ಕುಮಾರ್ ದೂರುದಾರ ನಟೇಶ್ ಅವರಿಂದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸಜಿತ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿ.ಕೃಷ್ಣಯ್ಯ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ಗಳಾದ ರವಿಕುಮಾರ್, ರೂಪಶ್ರೀ, ಲೋಕೇಶ್ ಹಾಗೂ ಸಿಬ್ಬಂದಿ ಮೋಹನ್ ಗೌಡ, ವೀರಭದ್ರಸ್ವಾಮಿ, ಆಶಾ, ತ್ರಿವೇಣಿ, ಪುಷ್ಪಲತಾ, ದಿನೇಶ್, ಲೋಕೇಶ್, ಪೃಥ್ವಿಷ, ಶೇಖರ್ ಇದ್ದರು.