ಪಿರಿಯಾಪಟ್ಟಣ: ತಾಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆ ಚರಂಡಿ ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಕಾವೇರಿ ನದಿ ಪಾತ್ರದ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗಿರುಗೂರು ಗ್ರಾಮದ ರಸ್ತೆ ಮುಳುಗಡೆಗೊಂಡು ಜಮೀನು ಹಾಗೂ ರಸ್ತೆಗಳು ಜಲಾವೃತಗೊಂಡಿದೆ. ಅದೇ ರೀತಿ ಕೊಪ್ಪ ಗಡಿ ಗ್ರಾಮದ ಹಲವು ಗ್ರಾಮಗಳು ಕಳೆದ ಬಾರಿಯಂತೆಯೇ ಈ ಬಾರಿಯೂ ಮುಳುಗಡೆಯಾಗುವ ಮುನ್ಸೂಚನೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರು ಭಯ ಭೀತಿಗೊಂಡಿದ್ದು ತಾಲೂಕು ಆಡಳಿತದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಜಮೀನಿಗೆ ನುಗ್ಗುತ್ತಿರುವ ನೀರು: ತಾಲೂಕಿನ ಕೊಪ್ಪ-ಗಿರುಗೂರು ಮುಖ್ಯ ರಸ್ತೆಯು ಅತ್ಯಂತ ಕಿರಿದಾಗಿ ಮತ್ತು ಹಳ್ಳಕೊಳ್ಳದಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಬಿದ್ದ ಮಳೆನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಅಕ್ಕಪಕ್ಕದ ಜಮೀನಿಗೆ ನುಗ್ಗುತ್ತಿರುವುದಲ್ಲದೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ರೈತ ಚಂದ್ರಶೇಖರ ಆರೋಪಿಸಿದ್ದಾರೆ.
ಸತತ ಮಳೆ ಹಾಗೂ ಪ್ರವಾಹದ ಭೀತಿ ಮತ್ತು ಜಮೀನುಗಳು ಮುಳುಗಡೆಯಾಗುವ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕುಂಝಿ ಅಹಮದ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜೆಸಿಬಿ ಮುಖಾಂತರ ಕಾಲುವೆ ತೋಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಅವರು ಮಾತನಾಡಿ, ಮಳೆಯಿಂದ ಜನತೆಗೆ ಯಾವೂದೇ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಕ್ರಮ ಹಾಗೂ ನೆರವು ನೀಡಲು ತಾಲೂಕು ಆಡಳಿತ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲೋಕ ಉಪಯೋಗಿ ಇಲಾಖೆ ಕಾರ್ಯಪಾಲಕ ಮುಖ್ಯ ಇಂಜಿನಿಯರ್ ವೆಂಕಟೇಶ್, ಎಇಇ ಕುಮಾರ್, ಬೈಲಕುಪ್ಪೆ ಪಿಎಸ್ಐ ಮಹಾಲಿಂಗಯ್ಯ, ತಾಲೂಕ್ ಭೂಮಾಪಕ ಗಿರೀಶ್, ಕಂದಾಯ ನಿರೀಕ್ಷಕ ಆನಂದ, ಗ್ರಾಮ ಲೆಕ್ಕಾಧಿಕಾರಿ ಸುನಿಲ್, ಗ್ರಾಮಸ್ಥರಾದ ರಾಜು, ಸಣ್ಣಪ್ಪ, ಅಸ್ಲಾಂ, ಶಿವಪ್ರಕಾಶ್, ಯಶವಂತ್ ಕುಮಾರ ಸೇರಿದಂತೆ ಮತ್ತಿತರರು ಇದ್ದರು.