
ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ ನಿರ್ವಾಹಕ ಮಹದೇವ ಎಂ.ಹುಕ್ಕೇರಿ ಅವರ ಮೇಲೆ ಮಹಾರಾಷ್ಟ್ರದ ಪುಂಡರು ಅಟ್ಟಹಾಸ ಮೆರೆದಿದ್ದು ಅಲ್ಲದೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬೈರೇಗೌಡ ಖಂಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಹಲ್ಲೆಗೆ ಒಳಗಾದ ನಿರ್ವಾಹಕ ಮಹದೇವ್ ಅವರಿಗೆ ವೈದ್ಯಕೀಯ ಖರ್ಚನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.
ಇನ್ನಿ ಮಹದೇವ್ ಅವರಿಗೆ ಜೀವ ಭಯವಿದೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಜತೆಗೆ ರಾಜ್ಯದ ಗಡಿಭಾಗದಲ್ಲಿ ಮಹಾರಾಷ್ಟ್ರ ಪುಂಡರು ಮೆರೆಯುತ್ತಿರುವ ಅಟ್ಟಹಾಸಕ್ಕೆ ಸರ್ಕಾರ ಕೂಡಲೇ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ರಾಜ್ಯದ ಬಸ್ಗಳಿಗೆ ಮಸಿ ಬಳಿಯುತ್ತಿರುವುದು ಹಾಗೂ ನಮ್ಮ ಚಾಲನಾ ಸಿಬ್ಬಂದಿಗಳನ್ನು ಹಿಂಸಿಸುತ್ತಿರುವ ಕಿಡಿಗೇಡಿಗಳಿಗೆ ಪೊಲೀಸರು ತಕ್ಕ ಬುದ್ಧಿಕಲಿಸಬೇಕಿದೆ. ಕಿಡಿಗೇಡಿಗಳ ನಡೆಯಿಂದ ಇತರ ಚಾಲಕ ನಿರ್ವಾಹಕರ ಮೇಲೆ ಹಲ್ಲೆ ಆಗುತ್ತಿದೆ ಅದಕ್ಕೆ ಒಂದು ಹೊಸ ಕಾನೂನು ರಚಿಸಿ ಚಾಲಕ ನಿರ್ವಾಹಕರಿಗೆ ಅಗತ್ಯ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಸಾರಿಗೆ ಸಚಿವರು ನಮ್ಮ ಚಾಲನಾ ಸಿಬ್ಬಂದಿಗಳ ಬಗ್ಗೆ ಕಾಳಜಿವಹಿಸಿ ಮುಂದೆ ಈ ಅಹಿತಕರ ಘಟನೆ ನಡೆಯದಾಗ ಸರ್ಕಾರ ಕೂಡಲೇ ಕ್ರಮ ಜರುಗಿಸುವಂತ ಕಾನೂನು ರೂಪಿಸಬೇಕು. ಅದಕ್ಕೆ ಸಚಿವರು ಧ್ವನಿಯಾಗಬೇಕು ಎಂದರು.
ಇನ್ನು ಮುಂದಿನ ದಿನಗಳಲ್ಲಿ ಚಾಲಕ ನಿರ್ವಾಹಕರ ಮೇಲೆ ಹಲ್ಲೆಯಾದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರ ಕ್ಷೇಮಾಭಿವೃದ್ಧಿ ಸಂಘವು ಮುಷ್ಕರ ಮಾಡಲು ಹಿಂಜರಿಯುವುದಿಲ್ಲ. ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಬೈರೇಗೌಡ ಎಚ್ಚರಿಕೆ ನೀಡಿದರು.