ಹೆಲ್ಮೆಟ್ ತಪಾಸಣೆ ವೇಳೆ ದಿಢೀರ್ ಬೈಕ್ ಅಡ್ಡಗಟ್ಟಿದ ಪೊಲೀಸರು: ಮೂರುವರೆ ವರ್ಷದ ಮಗು ಸಾವಿನ ಪ್ರಕರಣ- ASIಗಳ ಅಮಾನತು


ಮಂಡ್ಯ: ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದ ವೇಳೆ ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ಬೈಕನ್ನು ದಿಢೀರ್ ಅಡ್ಡಗಟ್ಟಿದ ಪರಿಣಾಮ ಬೈಕ್ ಸ್ಕಿಡ್ ಆಗಿದೆ. ಈ ವೇಳೆ ಬೈಕ್‌ನಲ್ಲಿದ್ದ ಮಗು ಕೆಳಗೆ ಜಾರಿ ಬಿದ್ದಿದ್ದರಿಂದ ಕ್ಯಾಂಡರ್ ಹರಿದು ಮಗು ಅಸುನೀಗಿದ ಪ್ರಕರಣದಲ್ಲಿ ಮೂವರು ಎಎಸ್‌ಐಗಳನ್ನು ಅಮಾನತು ಮಾಡಲಾಗಿದೆ.
ಮಗು ಸಾವಿಗೆ ಮಂಡ್ಯ ಟ್ರಾಫಿಕ್ ಪೊಲೀಸರು ಕಾರಣವೆಂದು ಕುಟುಂಬಂಸ್ಥರು ಹೆದ್ದಾರಿಯಲ್ಲಿ ಪ್ರತಿಭಟನೆ ಕುಳಿತ್ತಿದ್ದರು. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದ ಎಎಸ್ಐಗಳಾದ ಜಯರಾಮ್, ನಾಗರಾಜ್ ಹಾಗೂ ಗುರುದೇವ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಘಟನೆ ವಿವರ: ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿ ದಂಪತಿ ತಮ್ಮ ಮೂರೂವರೆ ವರ್ಷದ ಮಗು ಹೃತೀಕ್ಷಳಿಗೆ ನಾಯಿ ಕಡಿದಿದೆ ಎಂದು ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ ಬೈಕ್ ಸಹಿತ ಅದರಲ್ಲಿದ್ದವರು ಆಯತಪ್ಪಿ ಬಿದ್ದರು. ಆಗ ಹಿಂದಿನಿಂದ ಬರುತ್ತಿದ್ದ ಕ್ಯಾಂಟರ್ವೊಂದು ಮಗವಿನ ಮೇಲೆ ಹರಿದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ತಮ್ಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಮಂಡ್ಯದ ಸ್ವರ್ಣಸಂದ್ರ ಬಳಿ ಹೆಲ್ಮೆಟ್ ತಪಾಸಣೆಗಾಗಿ ಸಂಚಾರಿ ಪೊಲೀಸರು ಬೈಕ್ನಲ್ಲಿ ಬರುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಬೈಕ್‌ನಲ್ಲಿದ್ದ ದಂಪತಿ ಮತ್ತು ಮಗು ಆಯತಪ್ಪಿ ಕೆಳಗೆ ಬಿದ್ದಾಗ ಈ ದುರಂತ ಸಂಭವಿಸಿದೆ. ಘಟನೆ ಖಂಡಿಸಿ ಮಗುವಿನ ಪೋಷಕರು ಮತ್ತು ಸಾರ್ವಜನಿಕರು ಮಂಡ್ಯ ಜಿಲ್ಲಾ ಆಸ್ಪತ್ರೆಯ ಮುಂಭಾಗದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಎಸ್‌ಪಿ ಹೇಳಿದ್ದಿಷ್ಟು: “ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಸ್ವರ್ಣಸಂದ್ರ ಹತ್ತಿರ ಮಂಡ್ಯ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ಸಂಚಾರ ನಿಯಮ ಮತ್ತು ಸೇಫ್ಟಿ ಮೇಜರ್ಗಳನ್ನು ತೆಗೆದುಕೊಳ್ಳದೆ ವಾಹನ ಸವಾರರನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಮದ್ದೂರು ತಾಲೂಕಿನಿಂದ ದಂಪತಿ ತಮ್ಮ ಮಗುವಿಗೆ ನಾಯಿ ಕಚ್ಚಿದೆ ಎಂದು ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು.
ಆಗ ಸ್ಥಳದಲ್ಲಿದ್ದ ಟ್ರಾಫಿಕ್ ಸಿಬ್ಬಂದಿ, ಆ ವಾಹನವನ್ನು ತಡೆದು ಪರಿಶೀಲಿಸುತ್ತಿದ್ದಾಗ ಪೋಷಕರು ತಮ್ಮ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಸಿಬ್ಬಂದಿ ಆ ಬೈಕ್ ಬಿಟ್ಟು ಕಳಿಸುವ ವೇಳೆ ಇನ್ನೊಂದು ವಾಹನ ಬಂದು ಇವರ ಬೈಕ್ಗೆ ಟಚ್ ಆಗಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿಯೊಂದು ಮಗುವಿನ ಮೇಲೆ ಹರಿದುಹೋಗಿದೆ. ಪರಿಣಾಮ ಮಗು ತೀವ್ರವಾಗಿ ಗಾಯಗೊಂಡಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.

ಈ ಘಟನೆಗೆ ಪೊಲೀಸ್ ಇಲಾಖೆಯಿಂದ ವಿಷಾಧ ವ್ಯಕ್ತಪಡಿಸಲಾಗುತ್ತದೆ. ಇನ್ನು ಸರಿಯಾದ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಮೂವರು ಎಎಸ್ಐಗಳು ವಾಹನಗಳನ್ನು ತಪಾಸಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಜಯರಾಮ್, ನಾಗರಾಜು ಹಾಗೂ ಗುರುದೇವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇದಲ್ಲದೇ, ಹೆಚ್ಚಿನ ವಿಚಾರಣೆಯನ್ನು ಅವರ ಮೇಲೆ ಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ರಸ್ತೆ ತಡೆದು ಪ್ರತಿಭಟನೆ: ತಪ್ಪಿತಸ್ಥ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗೂ ಮೃತ ಮಗುವಿನ ಪೋಷಕರಿಗೆ ಸರ್ಕಾರದಿಂದ ಧನ ಸಹಾಯ ಕೊಡಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಅವರೆಲ್ಲರ ಜತೆ ನಾವು ಮಾತನಾಡಿದ್ದೇವೆ. ಧನ ಸಹಾಯದ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಜತೆಗೂ ಮಾತನಾಡಲಾಗಿದ್ದು, ಅವರು ಸಹ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಇನ್ಮುಂದೆ ಇಂತಹ ಘಟನೆ ನಡೆಯದಂತೆ ನಮ್ಮ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಎಸ್‌ಪಿ ಸ್ಪಷ್ಟನೆ ನೀಡಿದರು.
Related

 








