ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಜಲಮಂಡಳಿ ವತಿಯಿಂದ ಆಸೆನ್ಷನ್ ಚರ್ಚ್ ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯ ಮಾಡಿದ್ದರೂ ಕೂಡ ಕುಸಿಯುತಿದ್ದು, ಅದನ್ನು ತ್ವರಿತವಾಗಿ ಮರುಸ್ಥಾಪಸಲು ತಕ್ಷಣ ಕ್ರಮವಹಿಸಿ ಎಂದು ಬಿಬಿಎಂಪಿ ಪೂರ್ವ ವಲಯ ಆಯುಕ್ತೆ ಸ್ನೇಹಲ್ ಜಲಮಂಡಳಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪೂರ್ವ ವಲಯ ವ್ಯಾಪ್ತಿಯ ಪುಲಕೇಶಿನಗರ ಪೊಲೀಸ್ ಠಾಣೆಯಿಂದ ಡೇವಿಸ್ ರಸ್ತೆ ಮತ್ತು ವೀಲರ್ ರಸ್ತೆ ಮಾರ್ಗವಾಗಿ ಹೆಣ್ಣೂರು ಮುಖ್ಯ ರಸ್ತೆಯವರೆಗೆ ಇಂದು ನಡೆದ ಪರಿಶೀಲನೆ ಬಳಿಕ ಅವರು ಮಾತನಾಡಿದರು.
ಚರಂಡಿ ಸ್ಲ್ಯಾಬ್ ಬದಲಾಯಿಸಿ: ಪುಲಕೇಶಿನಗರ ಪೊಲೀಸ್ ಠಾಣೆ ಕೆಳಸೇತುವೆ ಬಳಿ ಚರಂಡಿ ಸ್ಲ್ಯಾಬ್ ಗಳು ಹಾಳಾಗಿದ್ದು, ವಾಹನ ಚಾಲನೆ ಮತ್ತು ಪಾದಚಾರಿ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಗಮನಿಸಿದರು. ಈ ಪೈಕಿ ಹಾಳಾಗಿರುವ ಸ್ಲ್ಯಾಬ್ ಗಳನ್ನು ತಕ್ಷಣ ಬದಲಾಯಿಸಿ, ಪಾದಚಾರಿ ಮಾರ್ಗವನ್ನು ಸುರಕ್ಷಿತಗೊಳಿಸಲು ಸೂಚಿಸಿದರು.
ಮರಗಳ ಸುತ್ತಲಿನ ಇಟ್ಟಿಗೆ ಗೋಡೆ ತೆರವುಗೊಳಿಸಿ: ಬಾಣಸವಾಡಿ ಪಾದಚಾರಿ ಮಾರ್ಗದ ಮರಗಳ ಸುತ್ತ ಇಟ್ಟಿಗೆ ಗೋಡೆಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ತಕ್ಷಣ ತೆರವುಗೊಳಿಸಿ, ಮರದ ಸುತ್ತಲೂ ಇಂಟರ್ ಲಾಕ್ ಟೈಲ್ಸ್ ಅಳವಡಿಸಲು ಸೂಚಿಸಿದರು.
ಪಾದಚಾರಿ ಮಾರ್ಗದ ಸ್ವಚ್ಛತಾ ಅಭಿಯಾನ: ಹಚಿನ್ಸ್ ರಸ್ತೆಯಿಂದ ಪಾದಚಾರಿ ಮಾರ್ಗದ ಪರಿಶೀಲನೆಯ ವೇಳೆ ಪಾದಚಾರಿ ಮಾರ್ಗಗಳ ವಿಶೇಷ ಸ್ವಚ್ಛತಾ ಅಭಿಯಾನ ಆರಂಭಿಸಬೇಕು. ಈ ಅಭಿಯಾನದಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಅಳವಡಿಸಿರುವರಿಗೆ ನೋಟಿಸ್ ನೀಡಿ ತೆರವು ಮಾಡುವುದು, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಸ್ವಚ್ಛತೆ ಕಾರ್ಯ ಕೈಗೊಳ್ಳಲು ಸೂಚಿಸಿದರು.
ಅನಧಿಕೃತವಾಗಿ ಪಾರ್ಕ್ ಮಾಡಿರುವ ವಾಹನಗಳ ಮೇಲೆ ದಂಡ: ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ನಿಲ್ಲಿಸಲಾಗಿದ್ದ ವಾಹನಗಳಿಗೆ ದಂಡ ವಿಧಿಸುವಂತೆ ಮತ್ತು ಸ್ಥಳೀಯ ಸಂಚಾರಿ ಪೊಲೀಸರಿಗೆ ಅವುಗಳನ್ನು ತಕ್ಷಣ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

2.5 ಕಿ.ಮೀ ನಡಿಗೆ ಮೂಲಕ ಪರಿಶೀಲನೆ: ಪುಲಕೇಶಿನಗರ ಪೊಲೀಸ್ ಠಾಣೆಯಿಂದ ಹೆಣ್ಣೂರು ಮುಖ್ಯ ರಸ್ತೆವರೆಗೆ, ಡೇವಿಸ್ ರಸ್ತೆ ಮತ್ತು ವೀಲರ್ ರಸ್ತೆ ಮಾರ್ಗವಾಗಿ ಸುಮಾರು 2.5 ಕಿಮೀ ದೂರದ ಪರಿಶೀಲನೆ ನಡೆಸಿದರು. ಈ ವೇಳೆ ಕಂಡುಬಂದ ಸಮಸ್ಯೆಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಆರೋಗ್ಯ ಮತ್ತು ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆಯ ಎ.ಜಿ.ಎಂ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಇಲಾಖೆ ಸಂಚಾರ ವಿಭಾಗದವರು ಸೇರಿದಂತೆ ಇತರ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.
Related
