
ನ್ಯೂಡೆಲ್ಲಿ: ರಾಜ್ಯದಲ್ಲಿ ಈ ಹಿಂದೆ ಭಾರೀ ಸದ್ದು ಮಾಡಿದ್ದ ಪ್ರೇಮಕುಮಾರಿ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರಿಗೆ ಸುಪ್ರೀಂ ಕೋರ್ಟ್ ನಲ್ಲೂ ಇಂದು ಹಿನ್ನಡೆಯಾಗಿದೆ.
ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಪ್ರೇಮಕುಮಾರಿ ಅವರು ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ರಾಮದಾಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್, ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡ ದ್ವಿಸದ್ಯಪೀಠ ಇಂದು ವಜಾ ಮಾಡಿದೆ.
ತನ್ನನ್ನು ವಂಚಿಸಿದ್ದಾರೆಂದು ಪ್ರೇಮಕುಮಾರಿ ಅವರು ರಾಮದಾಸ್ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ರಾಮದಾಸ್ ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರೆ ಹೈಕೋರ್ಟ್ ಪ್ರರಣವನ್ನು ರದ್ದುಪಡಿಸಲು ನಿರಾಕರಿಸಿತ್ತು.
ನಂತರ ರಾಮದಾಸ್ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅವರ ಮೇಲ್ಮನವಿ ಪರುಷ್ಕರಿಸಿ ತಡೆಯಾಜ್ಞೆ ನೀಡಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್ ಮಾಜಿ ಸಚಿವರ ಅರ್ಜಿಯನ್ನು ತಿರಸ್ಕರಿಸಿದೆ.
ಮೂರು ತಿಂಗಳ ಹಿಂದೆಯೂ ಕೂಡ ಮತ್ತೊಂದು ಪ್ರಕರಣದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಇಂದು ಈ ಅರ್ಜಿಯನ್ನು ವಜಾ ಮಾಡುವ ಮೂಲಕ ಒಟ್ಟಾರೆ 2 ಅರ್ಜಿಗಳನ್ನು ತಿರಸ್ಕರಿಸಿದೆ.
ಹೀಗಾಗಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣ ಮತ್ತೆ ವಿಚಾರಣೆ ಬರಲಿದೆ. ಇನ್ನು ಪ್ರೇಮ ಕುಮಾರಿ ಅವರ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು, ರಾಮ್ ಲಾಲ್ಚೌದರಿ ವಾದ ಮಂಡಿಸಿದರು.
ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅವರು ಈ ಪ್ರರಣದ ವಕಾಲತ್ತು ವಹಿಸಿದ್ದು ಒಂದು ರೂಪಾಯಿಯನ್ನು ಸಹ ಸಂಭಾವನೆ ಪಡೆಯದೆ ಉಚಿತವಾಗಿ ನಮ್ಮ ಪ್ರಕರಣವನ್ನು ನಡೆಸಿಕೊಟ್ಟಿದ್ದಾರೆ ಎಂದು ಪ್ರೇಮ ಕುಮಾರಿ ತಿಳಿಸಿದ್ದಾರೆ.