ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಸರ್ಕಾರ ಮತ್ತು ಆಡಳಿತ ವರ್ಗಗಳು ಮಾತುಕತೆಗಳ ಮೂಲಕ ಬಗೆಹರಿಸಲು ಮೀನಮೇಷ ಎಣಿಸುತ್ತಿವೆ. ಹೀಗಾಗಿ ಅಕ್ಟೋಬರ್ 5ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರಾರಸಾ ನಿಗಮಗಳ ನೌಕರರ ಫೆಡರೇಷನ್ ( CITU ) ತಿಳಿಸಿದೆ.
ಈ ಬಗ್ಗೆ ಸಿಐಟಿಯು ಅಧ್ಯಕ್ಷ ರೇವಪ್ಪ, ಉಪಾಧ್ಯಕ್ಷ ಡಾ. ಕೆ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಹಾಗೂ ಫೆಡರೇಷನ್ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಫೆಡರೇಶನ್ (CITU) ಮೂಲಕ ಈಗಾಗಲೇ ಸಾರಿಗೆ ಸಚಿವರಿಗೆ ಮನವಿ ಮಾಡಿ ಈ ಸಂಬಂಧ ಸಭೆ ಕರೆಯುವಂತೆ ಒತ್ತಾಯಿಸಿದ್ದೇವೆ. ಆದರೆ ಇಲ್ಲಿವರೆಗೂ ಸಭೆ ಕರೆದು ಬೇಡಿಕೆಗಳ ಬಗ್ಗೆ ಚರ್ಚಿಸಿಲ್ಲ ಎಂದು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ಈ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸಾರಿಗೆ ಸಚಿವರು ಮತ್ತು ನಿಗಮಗಳ ಆಡಳಿತ ವರ್ಗ ಸಮಂಜಸವಾಗಿ ಸ್ಪಂದಿಸದ ಕಾರಣ ನಮ್ಮ ಈ ಬೇಡಿಕೆಗಳ ಈಡೇರಿಕೆಗಾಗಿ 5.10.2023ರ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳು ತೀರ್ಮಾನಿಸಲಾಗಿದೆ ಎಂದು ವಿವರಿಸಿದ್ದಾರೆ.
ಪ್ರಮುಖ ಬೇಡಿಕೆಗಳು : 1)01.01.2020 ರಿಂದ ವೇತನ ಹೆಚ್ಚಳದ ಬಾಕಿ (ಅರಿಯರ್ಸ್) ಹಣ ನೀಡಬೇಕು. 2) 01.01.2020 ರಿಂದ ನಿವೃತ್ತಿ ಆದ ನೌಕರರ ವೇತನ ಹೆಚ್ಚಳದ ಪಿಕ್ಸೇಷನ್ ಆಗಬೇಕು. 3) ತುಟ್ಟಿ ಭತ್ಯೆ ಬಾಕಿ ಹಣ ನೀಡಬೇಕು. 4) 2021 ರ ಮುಷ್ಕರದ ವೇಳೆ BJP ಸರ್ಕಾರ ತೆಗೆದುಕೊಂಡಿರುವ ಎಲ್ಲಾ ರೀತಿಯ ಅಕ್ರಮ ಶಿಕ್ಷೆಗಳು ವಾಪಸ್ಸು ಆಗಬೇಕು.
5) ಎಲೆಕ್ಟ್ರಿಕ್ ಬಸ್ಸುಗಳನ್ನು ನಮ್ಮ ಸಾರಿಗೆ ನಿಗಮಗದ ನೌಕರರೇ ಓಡಿಸಬೇಕು. 6) ಕೇಂದ್ರ ಸರ್ಕಾರ FAME-2 ಯೋಜನೆ ( ಎಲೆಕ್ಟ್ರಿಕ್ ಬಸ್ಸುಗಳನ್ನು ) ಖಾಸಗೀಯವರ ಮೂಲಕ ಓಡಿಸುವ ಖಾಸಗೀಕರಣವನ್ನು ವಿರೋಧಿಸಿ. 7) BMTC ಯಲ್ಲಿ ಡಬ್ಬಲ್ ಡ್ಯೂಟಿ ಮಾಡಿಸಿ 4 ಗಂಟೆಗಳ ಕಾಲ OT ನೀಡುವುದನ್ನು ನಿಲ್ಲಿಸಿ ಕಾನೂನು ಬದ್ಧವಾಗಿ ಡಬಲ್ ವೇತನ ನೀಡಬೇಕು.
8) ಕಿರುಕುಳಗಳು/ ದೌರ್ಜನ್ಯದ/ ಭ್ರಷ್ಟಾಚಾರದ ಆಡಳಿತಕ್ಕೆ ಕಡಿವಾಣ ಹಾಕಬೇಕು. 9) ಗುತ್ತಿಗೆ ಕಾರ್ಮಿಕರ ನೇಮಕಾತಿ ವಿರೋಧಿಸಿ. 10) ಆಡಳಿತ ವರ್ಗಗಳು ಏಕ ಪಕ್ಷೀಯವಾಗಿ ಸುತ್ತೋಲೆಗಳನ್ನು ತರುವ ಪದ್ಧತಿ ನಿಲ್ಲಿಸಿ, ಕಾರ್ಮಿಕ ಸಂಘಗಳ ಜತೆ ಮಾತುಕತೆ ನಡೆಸಬೇಕು. ಉತ್ತಮ ಕೈಗಾರಿಕಾ ಬಾಂಧವ್ಯ ರೂಪಿಸಬೇಕು ಎಂಬ ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಅಂದಿನ ಪ್ರತಿಭಟನೆಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು, ಜತೆಗೆ ಖಾಸಗೀಕರಣ ವಿರೋಧಿಸಲು ಹಾಗೂ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸಂಘಟಿತ ಹೋರಾಟಕ್ಕೆ ಮುಂದಾಗೋಣ ಎಂದು ಕರೆ ನೀಡಿದ್ದಾರೆ.