ಇಂದು-ನಾಳೆ ಮೈಸೂರಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರವಾಸ: ಚಾಮುಂಡಿ ಬೆಟ್ಟಕ್ಕೂ ಸಾರ್ವಜನಿಕರಿಗೆ ಪ್ರವೇಶ ನಿಷೇಧ


ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ಆಗಮಿಸಲಿದ್ದು ಎರಡು ದಿನ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಸ್ಥಳಗಳಿಗೆ ಪ್ರವಾಸ ಮಾಡಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮುಖವಾಗಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ರಾಷ್ಟ್ರಪತಿ ಆಗಮನ ಹಿನ್ನೆಲೆಯಲ್ಲಿ ಸೋಮವಾರ (ಇಂದು) ಮೈಸೂರಿನ ಆಯುಷ್ (ಎಐಐಎಸ್‌ಎಚ್)ನಲ್ಲಿ ಯಾವುದೇ ಚಿಕಿತ್ಸೆಗಳು ಲಭ್ಯ ಇರುವುದಿಲ್ಲ. ಜತೆಗೆ ಸಾರ್ವಜನಿಕರ ಪ್ರವೇಶಕ್ಕೂ ನಿರ್ಬಂಧವಿದೆ.
ಇಂದು ಸಂಜೆ ವೇಳೆಗೆ ಚಾಮುಂಡಿ ಬೆಟ್ಟಕ್ಕೆ ಮುರ್ಮು ಅವರು ಭೇಟಿ ನೀಡಲಿದ್ದಾರೆ. ಈ ವೇಳೆ ಬೆಟ್ಟದತಾಯಿಯ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ ಎಂಟು ಗಂಟೆವರೆಗೂ ಚಾಮುಂಡಿ ಬೆಟ್ಟಕ್ಕೂ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ.
ಇನ್ನು ಸೆಪ್ಟೆಂಬರ್ 2ರಂದು ಅಂದರೆ ನಾಳೆ ರಾಷ್ಟ್ರಪತಿಗಳು ಐತಿಹಾಸಿಕವಾದ ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಭದ್ರತಾ ದೃಷ್ಟಿಯಿಂದ ಹಾಗೂ ಶಿಷ್ಟಾಚಾರ ಪಾಲನೆಗಾಗಿ ನಾಳೆ ಪ್ರವಾಸಿಗರಿಗೆ ಅರಮನೆಯ ಪ್ರವೇಶ, ವೀಕ್ಷಣೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಇಂದಿನಿಂದ ಮೈಸೂರು ಅರಮನೆ ಅವರಣದಲ್ಲಿ ನಡೆಯುವ ಧ್ವನಿ, ಬೆಳಕು ಕಾರ್ಯಕ್ರಮವನ್ನೂ ಕೂಡ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related

 








