ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ಬಸ್‌ನವರು ಟಿಕೆಟ್ ದರ ವಿಪರೀತ ಹೆಚ್ಚಿಸಿದ್ದು, ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ 2 ಸಾವಿರ ವಿಶೇಷ ಬಸ್‌ಗಳನ್ನು ಬಿಡಲಾಗಿದೆ. ಈ ಮೂಲಕ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಜೇಬಿಗೆ ಬೀಲುತ್ತಿದ್ದ ಕತ್ತರಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗಿದೆ.
KSRTC ಅಧಿಕಾರಿಗಳು ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಗೋವಾದಂತಹ ನೆರೆ ರಾಜ್ಯಗಳಿಗೆ ಹಬ್ಬಕ್ಕಾಗಿ ತೆರಳು ಮತ್ತು ಬರುವವರಿಗಾಗಿ ವಿಶೇಷ ಬಸ್ಗಳು ಸಂಚರಿಸಲಿವೆ. ಖಾಸಗಿ ಬಸ್‌ಗಳ ಬದಲು ಸರ್ಕಾರಿ ಬಸ್‌ಗಳನ್ನು ಬಳಸಿ ಎಂದು ತಿಳಿಸಿದ್ದಾರೆ.
ಇದರ ಜತೆಗೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಯಾದಗಿರಿ, ಮತ್ತು ಬೀದರ್ ಮುಂತಾದ ವಿವಿಧ ಸ್ಥಳಗಳಿಗೆ 2,000 ಹೆಚ್ಚುವರಿ ಬಸ್‌ಗಳನ್ನು ಓಡಿಸುವುದಾಗಿ ತಿಳಿಸಿದ್ದಾರೆ.
ಇನ್ನು ಈ ಸಮಯದಲ್ಲಿ ಸಾವಿರಾರು ಜನ ತಮ್ಮ ಊರುಗಳಿಗೆ ಪ್ರಯಾಣಿಸುವುದರಿಂದ, ಖಾಸಗಿ ಟ್ರಾವೆಲ್ ಆಪರೇಟರ್‌ಗಳು ಟಿಕೆಟ್‌ಗಳ ಬೆಲೆಯನ್ನು ಶೇ.30ರಿಂದ 100 ರಷ್ಟು ಹೆಚ್ಚಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹೆಚ್ಚಿನ ಬೇಡಿಕೆಯಿರುವ ಮಾರ್ಗಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಹೆಚ್ಚುವರಿ ಶುಲ್ಕ ವಸೂಲಿ ಮಾಡದಂತೆ ಖಾಸಗಿ ಬಸ್ ನಿರ್ವಾಹಕರಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಆ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೂ ಅಧಿಕಾರಿಗಳ ಎಚ್ಚರಿಕಗೆ ಖಾಸಗಿ ಬಸ್‌ನವರು ಸೊಪ್ಪಾಕಿದಂತೆ ಕಾಣುತ್ತಿಲ್ಲ.
ಬೆಂಗಳೂರಿನಿಂದ ತಮಿಳುನಾಡಿನ ನಾಮಕ್ಕಲ್‌ಗೆ ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್ ಸಾಮಾನ್ಯವಾಗಿ ಸುಮಾರು 1,000 ರೂ. ಇದೆ. ನಾನು ಸಾಮಾನ್ಯವಾಗಿ ಟಿಕೆಟ್ ಬುಕಿಂಗ್ ಮಡಿಕೊಂಡೆ ಹೋಗುತ್ತೇನೆ. ಈ ವೇಳೆ ಉತ್ತಮ ಆಫರ್ಗಳು ಮತ್ತು ಕಡಿಮೆ ಬೆಲೆಗಾಗಿ ಪರಿಶೀಲಿಸುತ್ತೇನೆ.
ಆದರೆ, ದೀಪಾವಳಿ ಬರುತ್ತಿದ್ದಂತೆ ಟಿಕೆಟ್ ದರ 2 ಸಾವಿರ ರೂಪಾಯಿ ದಾಟಿದೆ. ಹಬ್ಬ ಹರಿದಿನಗಳಲ್ಲಿ ಖಾಸಗಿ ಟ್ರಾವೆಲ್ ಆಪರೇಟರ್‌ಗಳು ಬೇಡಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಕಿಡಿಕಾರಿದ್ದಾರೆ.
ಇನ್ನು ದೀಪಾವಳಿ ಆಚರಣೆ ಮತ್ತು ಪ್ರವಾಸಿ ತಾಣಗಳಿಗೆ ಬೆಂಗಳೂರಿನಿಂದ ಹೋಗುವ ಜನರಿಗೆ ಖಾಸಗಿ ಬಸ್ ದುಬಾರಿ ದರದ ಬಿಸಿ ತಟ್ಟುತ್ತಿದೆ. ಹೀಗಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಾಸಗಿ ಟ್ರಾವೆಲ್ ಆಪರೇಟರ್‌ಗಳಿಗೆ ಹೆಚ್ಚಿನ ಶುಲ್ಕ ವಿಧಿಸದಂತೆ ಎಚ್ಚರಿಕೆ ನೀಡಿದ್ದಾರೆ ಮತ್ತು ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.