NEWSನಮ್ಮಜಿಲ್ಲೆನಮ್ಮರಾಜ್ಯ

BMTC ಸೇರಿ ಸಾರಿಗೆ ಬಸ್‌ಗಳಲ್ಲಿನ ತಂಬಾಕು ಜಾಹೀರಾತು ಕಿತ್ತೆಸೆದ ಕನ್ನಡ ಸಂಘಟನೆಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಹಾಕಿದ್ದ ಗುಟ್ಕಾ ಜಾಹೀರಾತುಗಳ ಪೋಸ್ಟರನ್ನು(Tobacco Advertisements Poster) ಕನ್ನಡ ಸಂಘಟನೆಗಳ ಕಾರ್ಯಕರ್ತರು ಕಿತ್ತೆಸೆಯುತ್ತಿದ್ದಾರೆ.

ಈ ಮೂಲಕ ಜೀವಕ್ಕೆ ಮಾರಕವಾಗುವ ಗುಟ್ಕಾದಂತಹ ವಸ್ತುಗಳ ಜಾಹೀರಾತುಗಳನ್ನು ಸಾರಿಗೆ ಇಲಾಖೆಯ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಅಂಟಿಸಿದ್ದರ ವಿರುದ್ಧ ಸಮರ ಸಾರಿದ್ದಾರೆ.

ಇನ್ನು ತಂಬಾಕು ಜಾಹಿರಾತುಗಳನ್ನ ಕನ್ನಡಿಗರು ಕಿತ್ತೆಸೆಯುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಆರಂಭವಾದ ಈ ಕಿಚ್ಚು ಇದೀಗಾ ಬೆಂಗಳೂರಿಗೂ ವ್ಯಾಪಿಸಿದೆ.

ಮೆಜೆಸ್ಟಿಕ್, ಕೆ.ಆರ್.ಪುರಂ ಬಸ್ ನಿಲ್ದಾಣಗಳಲ್ಲಿ ಹತ್ತಾರು ಮಂದಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬಸ್‌ನಲ್ಲಿದ್ದ ತಂಬಾಕು ಉತ್ಪನ್ನಗಳ ಜಾಹಿರಾತುಗಳನ್ನು ಹರಿದು ಹಾಕಿದ್ದಾರೆ.

ಅಲ್ಲದೆ ವಿಮಲ್, ಆರ್‌ಎಂಡಿ ಸೇರಿ ತಂಬಾಕು ಉತ್ಪನ್ನಗಳ ಜಾಹಿರಾತು ಪೋಸ್ಟರ್‌ಗಳನ್ನು ಸಾರಿಗೆ ಬಸ್‌ಗಳ ಮೇಲೆ ಅಂಟಿಸಿರೋದಕ್ಕೂ ಸಂಘಟನೆಗಳು ಕೂಡ ವಿರೋಧಿಸಿ ಪೋಸ್ಟರ್ ತೆರವು ಮಾಡಲು ಮುಂದಾಗಿದ್ದಾರೆ.

ಇನ್ನು ರೂಪೇಶ್ ರಾಜಣ್ಣ ನೇತೃತ್ವದ ಯುವ ಕರ್ನಾಟಕ ತಂಡದ ಕಾರ್ಯಕರ್ತರು ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ನುಗ್ಗಿ ಪೋಸ್ಟರ್, ಸ್ಟಿಕ್ಕರ್‌ಗಳನ್ನು ತೆರವು ಮಾಡಿದರು. ಈ ವೇಳೆ ಸಾರ್ವಜನಿಕರು ಕೂಡ ಕನ್ನಡ ಪರ ಹೋರಾಟಗಾರರನ್ನು ಬೆಂಬಲಿಸಿದರು.

ಅಲ್ಲದೆ ಕೂಡಲೇ ಎಲ್ಲ ಬಸ್‌ಗಳ ಮೇಲೆ ಅಂಟಿಸಿರೋ ಪೋಸ್ಟರ್‌ಗಳನ್ನ ತೆರವು ಮಾಡಬೇಕು. ಇಲ್ಲದಿದ್ದರೆ ಕಂಡ ಕಂಡಲ್ಲಿ ಬಸ್‌ಗಳನ್ನು ನಿಲ್ಲಿಸಿ ಜಾಹಿರಾತುಗಳಿಗೆ ಮಸಿ ಬಳಿಯುತ್ತೇವೆ ಅಂತ ಎಚ್ಚರಿಕೆ ನೀಡಿದರು.

ಜಾಹೀರಾತು ಪೋಸ್ಟರ್‌ಗಳನ್ನು ಕಿತ್ತೆಸೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ಒಂದು ವರ್ಷಕ್ಕೆ ಬಿಎಂಟಿಸಿ ಬಸ್‌ಗಳಿಗೆ ಅಳವಡಿಸಿರುವ ಜಾಹಿರಾತುಗಳಿಂದಲೇ 60 ಕೋಟಿ ರೂಪಾಯಿ ಆದಾಯ ನಿಗಮಕ್ಕೆ ಬರುತ್ತದೆ. ಕೇಂದ್ರ ಸರ್ಕಾರವೇ ತಂಬಾಕು ನಿಷೇಧ ಮಾಡಲಿ ಅಂತ ಹೇಳಿದ್ದಾರೆ.

ಸಚಿವರ ಈ ಹೇಳಿಕೆಗೆ ಕೆಂಡವಾಗಿರುವ ಕನ್ನಡ ಸಂಘಟನೆಯ ಕಾರ್ಯಕರ್ತರು ಆದಾಯ ಆಸೆ ಬಿಟ್ಟು, ಸಮಾಜದ ಸ್ವಾಸ್ಥ್ಯವನ್ನ ಕಾಪಾಡಿ. ಹೀಗೆ ಮೊಂಡುತನ ಪ್ರದರ್ಶನ ಮಾಡೋದು ಸರಿಯಲ್ಲ ಅಂತ ಎಚ್ಚರಿಸಿದ್ದಾರೆ.

ಇನ್ನು ಹುಬ್ಬಳಿ-ಧಾರವಾಡದಲ್ಲಿ ಗುಟ್ಕಾ ಜಾಹೀರಾತುಗಳ ವಿರುದ್ಧ ಎದ್ದಿದ್ದ ಕಿಚ್ಚು ಇದೀಗ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಸಂಘಟನೆಗಳು ಮಾತ್ರವಲ್ಲ. ನಾಗರೀಕರು ಕೂಡ ಸಾರಿಗೆ ಇಲಾಖೆಯ ವಿರುದ್ಧ ಧ್ವನಿ ಎತ್ತಿದ್ದಾರೆ.

Megha
the authorMegha

Leave a Reply

error: Content is protected !!