ಬರ್ನ್: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆಡಳಿತ ನಡೆಸುತ್ತಿರುವ ಬಲಪಂಥೀಯ ಪೀಪಲ್ಸ್ ಪಕ್ಷವು ದೇಶದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ, ಹಿಜಾಬ್ ಧರಿಸುವುದನ್ನು ನಿಷೇಧಿಸಿದೆ. ಬುರ್ಖಾ ನಿಷೇಧಗೊಳಿಸಿ ಕಾನೂನು ಜಾರಿಗೆ ತರುವ ವಿಧೇಯಕಕ್ಕೆ ಸ್ವಿಟ್ಜರ್‌ಲ್ಯಾಂಡ್ ಕೆಳಮನೆಯಾದ ನ್ಯಾಷನಲ್ ಕೌನ್ಸಿಲ್‌ನಲ್ಲಿ ಅಂಗೀಕಾರ ದೊರೆತಿದೆ. ಈಗಾಗಲೇ ಮೇಲ್ಮನೆಯಲ್ಲಿ ಅಂಗೀಕಾರ ದೊರೆತ ಕಾರಣ ಕೆಲವೇ ದಿನಗಳಲ್ಲಿ ಕಾನೂನು ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ, ಹಿಜಾಬ್ ಧರಿಸುವುದನ್ನು ನಿಷೇಧಿಸುವ ದಿಸೆಯಲ್ಲಿ ಸರ್ಕಾರ ಮಂಡಿಸಿದ ವಿಧೇಯಕಕ್ಕೆ 151-29ರಂತೆ ಅನುಮತಿ ದೊರೆತಿದೆ. ಬುರ್ಖಾ, ಹಿಜಾಬ್, ನಿಕಾಬ್ (ಕಣ್ಣಷ್ಟೇ ಕಾಣುವಂತೆ ಬಟ್ಟೆ ಸುತ್ತಿಕೊಳ್ಳುವುದು) ಧರಿಸುವುದನ್ನು ನಿಷೇಧಿಸುವ ಕುರಿತು ಎರಡು ವರ್ಷಗಳ ಹಿಂದೆಯೇ ಸ್ವಿಟ್ಜರ್‌ಲ್ಯಾಂಡ್ ಸರ್ಕಾರವು ಜನಾಭಿಪ್ರಾಯ ಸಂಗ್ರಹಿಸಿದೆ.
ಜನರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈಗ ಬುರ್ಖಾ ನಿಷೇಧಿಸಿ ಕಾನೂನು ಜಾರಿಗೆ ತರುತ್ತಿದೆ. ನಿಯಮ ಮೀರಿದರೆ 90 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ದೇಶದಲ್ಲಿ ಹೆಣ್ಣುಮಕ್ಕಳು ಬುರ್ಖಾ ಧರಿಸುವುದು ಭದ್ರತೆ ದೃಷ್ಟಿಯಿಂದ ಒಳ್ಳೆಯದಲ್ಲ ಹಾಗೂ ಮುಸ್ಲಿಂ ತೀವ್ರವಾದ ಪಸರಿಸಲು ಇದು ಕಾರಣ ಎಂಬ ನಂಬಿಕೆಯಿಂದಾಗಿ ಆಡಳಿತಾರೂಢ ಸರ್ಕಾರವು ಇಂತಹ ಕಾನೂನು ಜಾರಿಗೆ ತರುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಕೆಲವು ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ, ಹಿಜಾಬ್ ಧರಿಸಿ ಪ್ರತಿಭಟನೆ ನಡೆಸಿದ ಬಳಿಕ ಕಾನೂನು ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕವಾಗಿ ಮಾತ್ರವಲ್ಲ ಮನೆಗಳಲ್ಲೂ ಬುರ್ಖಾ ಧರಿಸಬಾರದು ಎಂಬ ನಿಯಮ ಜಾರಿಗೆ ತರಲಾಗುತ್ತಿದೆ.
ಜಗತ್ತಿನ ಯಾವ ದೇಶಗಳಲ್ಲಿ ಬುರ್ಖಾ ನಿಷೇಧ?: ಸ್ವಿಟ್ಜರ್‌ಲ್ಯಾಂಡ್ ಮಾತ್ರವಲ್ಲ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ, ಹಿಜಾಬ್ ಧರಿಸಬಾರದು ಎಂಬ ನಿಯಮ ಜಾರಿಗೆ ತರಲಾಗಿದೆ. ಕೆಲ ತಿಂಗಳ ಹಿಂದಷ್ಟೇ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ಇಸ್ಲಾಂ ರಾಷ್ಟ್ರವಾದ ಸೌದಿ ಅರೇಬಿಯಾ ನಿಷೇಧಿಸಿದೆ. ಫ್ರಾನ್ಸ್ ಕೂಡ ಇದೇ ತೀರ್ಮಾನ ತೆಗೆದುಕೊಂಡಿದೆ.
ಇನ್ನು ಆಸ್ಟ್ರೀಯಾ, ಬೆಲ್ಜಿಯಂ, ನೆದರ್‌ಲ್ಯಾಂಡ್, ಚೀನಾ, ಬಲ್ಗೇರಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಮುಸ್ಲಿಮರು ಬುರ್ಖಾ ಧರಿಸುವಂತಿಲ್ಲ ಎಂಬ ಕಾನೂನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕೆಲವು ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಹೋಗಲು ಆಗದ ಕಾರಣ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದರು. ಪ್ರಕರಣವೀಗ ಸುಪ್ರೀಂ ಕೋರ್ಟ್‌ನಲ್ಲಿದೆ.