ಕಾಡು ಪ್ರಾಣಿಗಳು ತಿನ್ನದ ಗಿಡ ಬೆಳೆಸಿ ರೈತರ ಬೆಳೆ ರಕ್ಷಿಸಿ: ಅರಣ್ಯ ಇಲಾಖೆಗೆ ಕುರುಬೂರು ಶಾಂತಕುಮಾರ್ ಆಗ್ರಹ


ಯಡಿಯಾಲ: ಕಾಡು ಪ್ರಾಣಿಗಳು ತಿನ್ನದ ಗಿಡ ಬೆಳೆಸುವ ಮೂಲಕ ರೈತರ ಬೆಳೆ ಸಂರಕ್ಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಯಡಿಯಾಲದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಪಾನ್ ದೇಶದಲ್ಲಿ ಯಾವುದೇ ಪ್ರಾಣಿಗಳು ತಿನ್ನಲು ಯೋಗ್ಯವಲ್ಲದ ಗಿಡವನ್ನು ಬೆಳೆಸುವ ಮೂಲಕ ರೈತರ ಬೆಳೆಗಳನ್ನು ಸಂರಕ್ಷಣೆ ಮಾಡುತ್ತಿದ್ದಾರೆ ಅದೇ ರೀತಿ ರಾಜ್ಯದಲ್ಲಿಯೂ ಅನುಸರಿಸುವ ಮೂಲಕ ಕಾಡಂಚಿನ ರೈತರ ಬೆಳೆಗಳನ್ನು ಸಂರಕ್ಷಣೆ ಮಾಡಿ ರೈತರ ನಷ್ಟ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ಹುಲಿ, ಆನೆ, ಜಿಂಕೆ ಹಂದಿಗಳ ಕಾಟ ಹೆಚ್ಚು ಆಗುತ್ತಿದ್ದು, ಅದನ್ನು ತಪ್ಪಿಸಲು ಅರಣ್ಯ ಇಲಾಖೆ ವಿಫಲವಾಗುತ್ತಿದೆ. ಪ್ರಾಣಿಗಳ ದಾಳಿಯಿಂದ ರೈತರ ಪ್ರಾಣವು ಹೋಗುತ್ತಿದೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನು ಜಪಾನ್ ದೇಶಕ್ಕೆ ಕಳಿಸಿ ವರದಿ ತರಿಸಿಕೊಂಡು ಜಾರಿ ಮಾಡಬೇಕು ಎಂದರು.
ಇನ್ನು ಭೀಮ, ಕೃಷ್ಣಾ ನದಿ ಪ್ರವಾಹ ಹಾನಿ, ಅತಿವೃಷ್ಟಿ ಮಳೆ ಹಾನಿಯಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ರೈತರು ಬೆಳೆದ ಹತ್ತಿ, ತೊಗರಿ, ಹೆಸರು, ಜೋಳ ಮತ್ತಿತರ ಬೆಳೆಗಳು ನಾಶವಾಗಿದ್ದು, ಕೂಡಲೇ ನಷ್ಟ ಪರಿಹಾರವನ್ನು ವೈಜ್ಞಾನಿಕ ಅಂದಾಜು ಮಾಡಿ ನೀಡಬೇಕು ಅಲ್ಲದೆ ಬೆಳೆಹಾನಿಗೊಳಗಾದ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ವಕೀಲ ರವಿಕುಮಾರ್ ಸಭೆ ಉದ್ಘಾಟನೆ ಮಾಡಿ, ಹೋರಾಟಗಾರರಿಗೆ ಕಾನೂನು ಅರಿವು ಇದ್ದರೆ ಯಾವುದೇ ಸಮಸ್ಯೆಯನ್ನು ನಿಭಾಯಿಸಬಹುದು ಎಂದರು.

ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕ್ಕಳ್ಳಿ ಮಹದೇವಸ್ವಾಮಿ, ಉಡಿಗಾಲ ರೇವಣ್ಣ, ವರಕೋಡು ನಾಗೇಶ್, ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ಕೋಟೆ ರಾಜೇಶ್, ದೇವನೂರು ವಿಜಯೇಂದ್ರ, ನಂಜಾಪುರ ಸತೀಶ್, ಮಾರ್ಬಳ್ಳಿ ನೀಲಕಂಠಪ್ಪ, ಪಟೇಲ್ ಶಿವಮೂರ್ತಿ.
ಕೋಟೆ ಸುನೀಲ್, ಕಾಟೂರು ಮಹದೇವಸ್ವಾಮಿ, ರಂಗರಾಜು, ಬಿ.ಪಿ. ಪರಶಿವಮೂರ್ತಿ, ಕೆಂಡಗಣಪ್ಪ, ವಾಜಮಂಗಲ ಮಹದೇವು, ಶಿವಸ್ವಾಮಿ, ಕಿರಗಸೂರು ಪ್ರಸಾದ್ ನಾಯಕ, ದೇವನೂರು ಮಹಾದೇವಪ್ಪ, ಬನ್ನೂರು ಸೂರಿ, ಕುರುಬೂರು ಪ್ರದೀಪ್, ಕೆಂಡಗಣಸ್ವಾಮಿ, ಕುರುಬೂರು ಗುರುಸ್ವಾಮಿ, ಗೌರಿಶಂಕರ, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ವಾಜಮಂಗಲ ನಾಗೇಂದ್ರ, ಉಮೇಶ್ ಮುಂತಾದವರು ಇದ್ದರು.
Related
