ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಮತ್ತು ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ರೈತರು ಸರ್ಕಾರದ ಗಮನಸೆಳೆಯುವ ಸಲುವಾಗಿ ದಿನಕ್ಕೊಂದು ರೀತಿಯ ಪ್ರತಿಭಟನೆ ಚಳವಳಿ ನಡೆಸುತ್ತಿದ್ದರೂ ನೀರು ಹರಿಯುವುದು ಮಾತ್ರ ನಿಂತಿಲ್ಲ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮುಂದುವರಿದಿದೆ. ಈ ಬಾರಿ ಅರೆಬೆತ್ತಲೆ, ಚಪ್ಪಡಿಕಲ್ಲು ಹೊತ್ತು, ಬಾರುಕೋಲು, ಖಾಲಿ ಬಿಂದಿಗೆ ಹಿಡಿದು ಹೀಗೆ ಹತ್ತು ಹಲವು ಪ್ರತಿಭಟನೆಗಳನ್ನು ನಡೆಸಿ ರೈತರು ತಮ್ಮ ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ.
ಆದರೂ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ. ಇದದರಿಂದ ಇನ್ನಷ್ಟು ಆಕ್ರೋಶಗೊಂಡಿರುವ ಮಂಡ್ಯದ ರೈತರೊಬ್ಬರು ತನ್ನ ಜಮೀನಿನಲ್ಲಿ ಜೀವಂತ ಸಮಾಧಿಯಾಗುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ್ದಲ್ಲದೆ ಆಕ್ರೋಶದ ಕಿಚ್ಚನ್ನು ಹೊರ ಹಾಕಿದ್ದಾರೆ.
ಮಂಡ್ಯ ತಾಲೂಕಿನ ಉಪ್ಪಾರಕನಹಳ್ಳಿ ಗ್ರಾಮದ ರೈತ ಶಿವಕುಮಾರ್ ಎಂಬುವರು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಜಮೀನಿನಲ್ಲಿ ಕುತ್ತಿಗೆ ತನಕ ಮಣ್ಣಿನಲ್ಲಿ ಶರೀರವನ್ನು ಹೂತು ತಲೆಯನ್ನು ಹೊರ ಹಾಕಿ ಜೀವಂತ ಸಮಾಧಿಯಾಗುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರನ್ನು ಜೀವಂತ ಸಮಾಧಿ ಮಾಡುತ್ತಿದೆ. ಇಷ್ಟು ದಿನ ವಿರೋಧಿ ಘೋಷಣೆ ಕೂಗುತ್ತಿದ್ದೆವು. ಆದರೆ ಇನ್ನು ಮುಂದೆ ಅವರ ಪರವಾಗಿ ಘೋಷಣೆ ಕೂಗುತ್ತೇವೆ. ಏಕೆಂದರೆ ನಾವು ಏನೇ ಮಾಡಿದರೂ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವುದಿಲ್ಲ. ವರುಣನ ಕೃಪೆಯಿಂದ ಜಲಾಶಯ ತುಂಬುತ್ತಿದೆ. ರೈತರನ್ನು ಸಮಾಧಿ ಮಾಡುವುದನ್ನು ಬಿಟ್ಟು. ಇನ್ನಾದರೂ ನೀರು ಹರಿಸುವುದನ್ನು ನಿಲ್ಲಿಸಲಿ ಎಂದು ಅವರು ಆಗ್ರಹಿಸಿದ್ದಾರೆ.