ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಕ್ಟೋಬರ್ 5ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ( CITU ) ಹಮ್ಮಿಕೊಂಡಿದ ಪ್ರತಿಭಟನೆಯನ್ನು ಕೈ ಬಿಡಲಾಗಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ತಿಳಿಸಿದ್ದಾರೆ.
ಸಿಐಟಿಯು ಅಧ್ಯಕ್ಷ ರೇವಪ್ಪ, ಉಪಾಧ್ಯಕ್ಷ ಡಾ. ಕೆ. ಪ್ರಕಾಶ್ ಹಾಗೂ ಫೆಡರೇಷನ್ ಪದಾಧಿಕಾರಿಗಳು ಸಾರಿಗೆ ಸಚಿವರಿಗೆ ನೌಕರರ ಸಮಸ್ಯೆ ಆಲಿಸುವ ಜತೆಗೆ ಪರಿಹರಿಸುವ ಸಂಬಂಧ ಸಭೆ ಕರೆಯುವಂತೆ ಒತ್ತಾಯಿಸಿದ್ದೆವು. ಆದರೆ ಇಲ್ಲಿವರೆಗೂ ಸಭೆ ಕರೆದು ಬೇಡಿಕೆಗಳ ಬಗ್ಗೆ ಚರ್ಚಿಸಿಲ್ಲ ಅಂತ ಅ.5ರಂದು ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಕಳೆದ ಸೆಪ್ಟೆಂಬರ್‌ನಲ್ಲಿ ತೀರ್ಮಾನ ತೆಗೆದುಕೊಂಡಿದ್ದೆವು.
ಈ ಮಧ್ಯೆ ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಸಭೆ ಕರೆಯುವಂತೆ ಮನವಿ ಮಾಡಿದ್ದೆವು. ಸಾರಿಗೆ ಸಚಿವರು KSRTCಯ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಿಗಮದ ಎಲ್ಲ ಹಿರಿಯ ಅಧಿಕಾರಿಗಳನ್ನೊಳಗೊಂಡು CITU ಫೆಡರೇಷನ್ ನೀಡಿದ್ದ ಬೇಡಿಕೆಗಳ ಬಗ್ಗೆ 30.09.202 ರ ಶನಿವಾರ KSRTC ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ಬೇಡಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿಲಾಯಿತು. ಫೆಡರೇಷನ್ ಮುಖಂಡರ ಜತೆ ನಡೆದ ಸಭೆಯಲ್ಲಿ ನಾವಿ ಇಟ್ಟಿರುವ ಬೇಡಿಕೆಗಳ ಅಂಶಗಳ ನಡಾವಳಿಯನ್ನು ಮಾಡಿ ಸಚಿವರ ಅಧ್ಯಕ್ಷತೆಯಲ್ಲಿ ಪುನಃ ಸಭೆ ನಡೆಸುವುದಾಗಿ ಎಂಡಿ ತಿಳಿಸಿದರು. ಸಚಿವರು ಸಹ ಸಭೆಯನ್ನು ನಡೆಸೋಣ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ನಾವು ಸಹ ವಿಳಂಬವಿಲ್ಲದೆ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದೆವು. ಅಂತಿಮವಾಗಿ ವ್ಯವಸ್ಥಾಪಕ ನಿರ್ದೇಶಕರು ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿದ್ದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಪುನಃ ಸಭೆಯನ್ನು ಕರೆದು ಚರ್ಚಿಸಿ ಬೇಡಿಕೆಗಳನ್ನು ಇತ್ಯರ್ಥಪಡಿಸುವ ಪ್ರಯತ್ನದಲ್ಲಿ ಮುಂದುವರಿಯುವುದರಿಂದ 5.10.2023 ರಂದು ನಡೆಸಲು ತೀರ್ಮಾನಿಸಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು ಚರ್ಚೆ ಮಾಡಿ 05.10.2023 ರಂದು ನಡೆಸಲು ತೀರ್ಮಾನಿಸಿದ್ದ ಪ್ರತಿಭಟನೆಯನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.