
ನೆಲಮಂಗಲ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ 17ರ ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತನಹಳ್ಳಿಯ ಬೋಳಾರೆ ಕ್ವಾರೆಯಲ್ಲಿ ಭಾನುವಾರ ನಡೆದಿದೆ.
ಕಾಮಾಕ್ಷಿಪಾಳ್ಯದ ಕಾವೇರಿಪುರ ನಿವಾಸಿ ಪೃತ್ವಿಕ್ (17) ಮೃತ ಬಾಲಕ. ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರ (ಅ.12) ಮಧ್ಯಾಹ್ನ ಮೃತ ಬಾಲಕ ಸೇರಿ ಒಟ್ಟು ಆರು ಸ್ನೇಹಿತರು ಈಜಾಡಲು ಬೋಳಾರೆ ಕ್ವಾರೆಗೆ ತೆರಳಿದ್ದರು.
ಈ ವೇಳೆ ಪೃತ್ವಿಕ್ ಈಜು ಬಾರದಿದ್ದರೂ ಸ್ನೇಹಿತರ ಒತ್ತಾಯಕ್ಕೆ ಮಣಿದ ಮೃತ ಬಾಲಕ ಕ್ವಾರೆಗೆ ಇಳಿದು, ನೀರಿನಲ್ಲಿ ಮುಳುಗಿದ್ದಾನೆ. ಅದನ್ನು ಕಂಡ ಆತನ ಸ್ನೇಹಿತರು ಭಯದಿಂದ ಸ್ಥಳದಿಂದ ಪರಾರಿಯಾಗಿದ್ದಾರೆ.
ಸದ್ಯ ಮೃತ ಬಾಲಕನ ಪೋಷಕರು ಸ್ನೇಹಿತರಿಂದಲೇ ನಮ್ಮ ಮಗ ಮೃತಪಟ್ಟಿರುವುದು ಎಂದು ಆರೋಪಿಸಿದ್ದು, ಬಾಳಿ ಬದುಕಬೇಕಿದ್ದ ಬಾಲಕ ಹುಡುಗರ ಸಹವಾಸದಿಂದ ಅಸುನೀಗಿರುವುದಕ್ಕೆ ಪಾಲಕರು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
Related
