ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಸಬ್ಬೇನಹಳ್ಳಿ, ಭಾರತಿಬೈಲ್ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಕಳಸ ತಾಲೂಕಿನ ಗಾಳಿಗಂಡಿ ಬಳಿ ರಸ್ತೆಗೆ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಮಳೆಗೆ ತುಂಗಾ ನದಿ ಭಾರಿ ಪ್ರಮಾಣದಲ್ಲಿ ಏರಿಕೆ: ಇನ್ನು ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ತುಂಗಾ ನದಿ ಹರಿವಿನಲ್ಲಿ ಕ್ಷಣ ಕ್ಷಣಕ್ಕೂ ಏರಿಕೆ ಆಗ್ತಿದೆ.. ಈ ಹರಿವು ಇನ್ನಷ್ಟು ಹೆಚ್ಚಾದ್ರೆ, ಶೃಂಗೇರಿಯ ಗಾಂಧಿ ಮೈದಾನ ಜಲಾವೃತವಾಗಲಿದೆ.
ಇನ್ನು ದಕ್ಷಿಣ ಕನ್ನಡದಲ್ಲಿ ವರುಣ ವಿಶ್ರಾಂತಿಯನ್ನೇ ತೆಗೆದುಕೊಂಡಿಲ್ಲ. ಹೀಗಾಗಿ ವಿಪರೀತ ಮಳೆಯಾಗುತ್ತಿದ್ದು, ಈ ಕಾರಣದಿಂದ ರಸ್ತೆಗಳೆಲ್ಲ ನೀರಿನಿಂದ ಮಾಯವಾಗಿವೆ. ಅದೆಷ್ಟರ ಮಟ್ಟಿಗೆ ಅಂದ್ರೆ ದಾರಿ ಕಾಣದೇ ಬಸ್ವೊಂದು ಗದ್ದೆಗೆ ಉರುಳಿಸಿದೆ. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ಈ ಘಟನೆ ನಡೆದಿದೆ.
ಕೆಆರ್ಎಸ್ಗೆ ಜೀವಕಳೆ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಆಗ್ತಿದೆ. ಇದರಿಂದ ಕೆಆರ್‌ಎಸ್ ಡ್ಯಾಂಗೆ 25 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರ್ತಿದೆ. ಸದ್ಯ 108 ಅಡಿಗೆ ಕೆಆರ್‌ಎಸ್ ಡ್ಯಾಂನ ನೀರಿನಮಟ್ಟ ತಲುಪಿದೆ. ಇತ್ತ, ಮಲೆನಾಡು ಅಷ್ಟೇ ಅಲ್ಲ, ಬಯಲು ಸೀಮೆಯಲ್ಲೂ ಮಳೆ ಅಬ್ಬರಿಸಿದೆ. ಕಲಬುರಗಿ ಜಿಲ್ಲೆ ಅಫ್ಜಲ್ಪುರ ತಾಲೂಕಿನ ದೇವರ ಗಾಣಗಾಪುರದ ಗುರು ದತ್ತಾತ್ರೇಯ ದೇವಸ್ಥಾನ ಬಳಿ ಮಳೆರಾಯ ಅಬ್ಬರಿಸಿದ್ದಾನೆ. ಇದರಿಂದ ದೇಗುಲದ ಆವರಣವೆಲ್ಲಾ ಜಲಾವೃತಗೊಂಡಿದೆ.
ಇತ್ತ, ರಾಯಚೂರು ಜಿಲ್ಲೆ ದೇವದುರ್ಗದಲ್ಲೂ ಮಳೆ ಆರ್ಭಟಿಸಿದೆ. ದೇವದುರ್ಗದ ಬಸ್ ನಿಲ್ದಾಣ ಹಳ್ಳದಂತಾಗಿದ್ದು, ಪಾರ್ಕಿಂಗ್ ಮಾಡಿದ್ದ ವಾಹನಗಳು ಅರ್ಧದಷ್ಟು ಮುಳುಗಡೆ ಆಗಿವೆ. ಇನ್ನು ಮಳೆಗೆ ಹಲವು ಜಿಲ್ಲೆಗಳು ತತ್ತರಿಸಿ ಹೋಗಿದ್ದು, ಜುಲೈ 16ರ ವರೆಗೆ ದಕ್ಷಿಣ ಒಳನಾಡು, ಕರಾವಳಿ ಭಾಗಕ್ಕೆ ರೆಡ್ ಅಲರ್ಟ್ ಮುಂದುವರಿದಿದೆ.
ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ಹಾಸನ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಸಹಜವಾಗಿಯೇ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಕಾರವಾರ ತಾಲೂಕಿನಲ್ಲಿ ಹಲವು ರಸ್ತೆಗಳು, ಗ್ರಾಮಗಳು ಜಲಾವೃತಗೊಂಡಿವೆ.
ಎಲ್ಲಿ ಏನೇನು ಆಗ್ತಿದೆ..?: ಅರಗಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ನೀರು ನಿಂತಿದೆ. ಭಾರೀ ಪ್ರಮಾಣದಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಗೋವಾ ಮಂಗಳೂರು ನಡುವಿನ ರಸ್ತೆ ಬಂದ್ ಆಗಿದೆ. ಇನ್ನು, ಹಬ್ಬುವಾಡ ರಸ್ತೆ ಕೂಡ ಜಲಾವೃತವಾಗಿದೆ.
ಅಷ್ಟೇ ಅಲ್ಲ, ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ. ತಡರಾತ್ರಿ ಗುಡ್ಡ ಕುಸಿದಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ರಾಗಿಹೊಸಳ್ಳಿ ಬಳಿ ಘಟನೆ ನಡೆದಿದೆ. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲೂ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ವರ್ನಕೇರಿ ಬಳಿ ಅನಾಹುತ ಆಗಿದೆ. ಪರಿಣಾಮ ಹೊನ್ನಾವರ-ಗೇರುಸೊಪ್ಪ-ಸಾಗರ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗುಡ್ಡ ಕುಸಿತದಿಂದ ರಸ್ತೆಯಲ್ಲೇ ವಾಹನಗಳು ಸಾಲುಗಟ್ಟಿ ನಿಂತಿವೆ.