CRIMENEWSನಮ್ಮರಾಜ್ಯ

ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಬೇಲ್‌ ಅರ್ಜಿ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ – ಇಂದು ತೀರ್ಪು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜಾಮೀನು ಕೋರಿ 2ನೇ ಬಾರಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾದ ಪ್ರತಿವಾದ ಆಲಿಸಿ ಇಂದಿಗೆ ತೀರ್ಪು ಕಾಯ್ದಿರಿಸಿದೆ.

ಹೈಕೋರ್ಟ್‌ ಸೂಚನೆ ಮೇರೆಗೆ ಪ್ರಜ್ವಲ್‌ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಅರ್ಜಿ ಸಂಬಂಧ ಗುರುವಾರ ನಡೆದ ವಿಚಾರಣೆಗೆ ಹಾಜರಾದ ಸಿಐಡಿಯ ಎಸ್‌ಐಟಿ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದಾರೆ.

ಇದಕ್ಕೂ ಮುನ್ನ ಆರೋಪಿ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ವಾದ ಮಂಡಿಸಿ, ಪ್ರಜ್ವಲ್‌ ಬಂಧನವಾಗಿ 14 ತಿಂಗಳು ಕಳೆದಿದೆ. ಇದೇ ಪ್ರಕರಣದ ಆರೋಪಿ ಎಚ್‌.ಡಿ.ರೇವಣ್ಣ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ ನೀಡಿದೆ. ಹೀಗಾಗಿ ಪ್ರಜ್ವಲ್‌ಗೂ ಜಾಮೀನು ನೀಡುವಂತೆ ಕೋರಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್‌ ಜಾಮೀನು ಕೋರಿ ಮೊದಲ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಬಳಿಕ ಪ್ರಜ್ವಲ್‌ ಜಾಮೀನು ಕೋರಿ ಕಳೆದ ಜೂನ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಪ್ರಜ್ವಲ್‌ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿ ವಿಚಾರಣೆ ನಿನ್ನೆ ನಡೆದಿದ್ದು, ಇಂದು ಆದೇಶ ಹೊರಬೀಳಲಿದೆ.

Megha
the authorMegha

Leave a Reply

error: Content is protected !!