CRIMENEWSನಮ್ಮರಾಜ್ಯ

ಅತ್ಯಾಚಾರ ಪ್ರಕರಣ : ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಜೀವವಿರುವವರೆಗೂ ಜೈಲು ಶಿಕ್ಷೆ, 11.75 ಲಕ್ಷ ರೂ. ದಂಡ ವಿಧಿಸಿ ಕೋರ್ಟ್‌ ತೀರ್ಪು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆ.ಆ‌ರ್.ನಗರದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೋಷಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ ಹಾಗೂ 11.75 ಲಕ್ಷ ರೂ. ದಂಡ ವಿಧಿಸಿರುವ ನ್ಯಾಯಾಲಯ ಅದರಲ್ಲಿ ಸಂತ್ರಸ್ತೆಗೆ 11 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಕೆ.ಆರ್. ನಗರದಲ್ಲಿ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣ ಬಗ್ಗೆ ಸರ್ಕಾರಿ ಪರ ವಕೀಲರಾಗಿ ಎನ್. ಜಗದೀಶ್, ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲರಾಗಿ ನಳಿನಿ ಮಾಯಾಗೌಡ ಅವರು ವಾದ ಪ್ರತಿವಾದ ಮಂಡಿಸಿದರು.

ಈ ವಾದ ಪ್ರತಿವಾದದ ನಂತರ ನ್ಯಾ. ಸಂತೋಷ್ ಗಜಾನನ ಭಟ್ ಅವರ ಪೀಠ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. ಇನ್ನು ದೋಷಿ ಎಂದು ತೀರ್ಪು ಹೊರಬೀಳುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಪ್ರಜ್ವಲ್, ಹಾಸನ ಜಿಲ್ಲೆಗೆ ಸಾಕಷ್ಟು ಮಾಡಿದ್ದೇನೆ. ಚುನಾವಣೆಗೆ 6 ದಿನ ಮುಂಚಿತವಾಗಿ ಈ ವಿಡಿಯೋ ರಿಲೀಸ್ ಮಾಡಿದ್ದಾರೆ. ನಾನು ಮಹಿಳೆಯ ಅತ್ಯಾಚಾರ ಮಾಡಿದ್ದರೆ ಆಕೆಯ ಸಹೋದರಿ ನಮ್ಮ ಮನೇಲಿ ಕೆಲಸ ಮಾಡುತ್ತಿದ್ದರ ಎಂದು ಕಣ್ಣೀರಿಟ್ಟರು.

ಇದೆಲ್ಲ ಹಲವು ವರ್ಷಗಳ ಹಿಂದೆ ನಡೆದಿದೆ ಎಂದು ಹೇಳಿದ್ದಾರೆ. ವಿಡಿಯೋ ಬಂದ ಮೇಲೆ ಮಹಿಳೆ ಹೊರಗೆ ಬಂದು ದೂರು ನೀಡಿದ್ದಾಳೆ. ಇದೆಲದರಿಂದ ನನ್ನ ಕುಟುಂಬವನ್ನೇ ನಾನು ಬಿಟ್ಟಂತೆ ಆಗಿಹೋಗಿದೆ. ಅಪ್ಪ – ಅಮ್ಮನನ್ನ 6 ತಿಂಗಳಿಂದ ನೋಡಿಲ್ಲ. ದೋಷಿ ಅಂತ ಹೇಳಿದ್ದೀರಿ, ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ. ಶಿಕ್ಷೆ ನೀಡುವಾಗ ನನ್ನ ಕುಟುಂಬವನ್ನು ಪರಿಗಣಿಸಿ ಅಂತ ನ್ಯಾಯಾಧೀಶರ ಎದುರು ಪ್ರಜ್ವಲ್ ಕಣ್ಣೀರಿಟ್ಟು ಬೇಡಿಕೊಂಡರು.

ನನಗೆ ಕುಟುಂಬ ಇದೆ, 6 ತಿಂಗಳಿಂದ ಅಪ್ಪ-ಅಮ್ಮನನ್ನ ಸರಿಯಾಗಿ ನೋಡಿಲ್ಲ. ಪ್ರತಿಬಾರಿಯೂ ಕೋರ್ಟ್‌ಗೆ ಬರ್ತಾ ಇದ್ದೀನಿ. ನನ್ನ ಕುಟುಂಬ ನನ್ನಿಂದ ಸಂಪೂರ್ಣ ದೂರವಾಗಿದೆ. ನಾನು ರಾಜಕೀಯವಾಗಿ ಬೇಗ ಬೆಳೆದಿದ್ದೇ ತಪ್ಪಾಯ್ತು. ಎಸ್‌ಐಟಿ ನಂಬರ್ ನೀಡಿದ್ದರೂ ಯಾರು ದೂರು ನೀಡಲಿಲ್ಲ. ನಾನು ಕಾಲೇಜಿನಲ್ಲಿ ಮೆರಿಟ್ ವಿದ್ಯಾರ್ಥಿ ಆಗಿದ್ದೆ. ನನ್ನನ್ನ ದುರುದ್ದೇಶದಿಂದ ಸಿಲುಕಿಸಿದ್ರು ಅಂತ ನ್ಯಾಯಾಧೀಶರ ಮುಂದೆ ಗಳಗಳನೆ ಅತ್ತರು.

ಪ್ರಜ್ವಲ್‌ ರೇವಣ್ಣ ಶಿಕ್ಷೆಯ ವಿವರ: ಯಾವ ಸೆಕ್ಷನ್ ಅಡಿ ಎಷ್ಟು ದಂಡ?

ಐಪಿಸಿ ಸೆಕ್ಷನ್ 376 (2)(k) ಅಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ. 376(2)(1) ಅಡಿ ಪದೇಪದೆ ಅತ್ಯಾಚಾರಕ್ಕೆ ಜೀವನಪರ್ಯಂತ ಜೈಲು, 5 ಲಕ್ಷ ರೂ. ದಂಡ

ಐಪಿಸಿ ಸೆಕ್ಷನ್ 354(A) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ. ಐಪಿಸಿ ಸೆಕ್ಷನ್ 354 (8) ಅಡಿ 7 ವರ್ಷ ಸೆರೆವಾಸ, 50,000 ರೂಪಾಯಿ ದಂಡ

ಐಪಿಸಿ ಸೆಕ್ಷನ್ 354 (c) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ. ಸೆಕ್ಷನ್ 506 ಅಡಿ 2 ವರ್ಷ ಸೆರೆವಾಸ 10,000 ರೂ. ದಂಡ. ಸೆಕ್ಷನ್ 201 ಅಡಿ 3 ವರ್ಷ ಸೆರೆವಾಸ 25,000 ರೂ. ದಂಡ. ಐಟಿ ಕಾಯ್ದೆ ಸೆ.66(E) ಅಡಿ 3 ವರ್ಷ 25,000 ರೂ. ದಂಡ.

ಪ್ರಜ್ವಲ್ ರೇವಣ್ಣನಿಗೆ ಇಂದಿನಿಂದಲೇ ಶಿಕ್ಷೆ ಆರಂಭ, ಇಲ್ಲಿಯವರೆಗಿನ ಜೈಲುವಾಸ ಮೈನಸ್ ಆಗುವುದಿಲ್ಲ.

ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನವಾಗಿರಲಿಲ್ಲ, ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್‌ನನ್ನು ವಶಕ್ಕೆ ಪಡೆಯಲಾಗಿತ್ತು.

ಏನಿದು ಪ್ರಕರಣ?: ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ನಂತರ ವಿಷಯ ಹೊರಗೆ ಬರುತ್ತೆ ಎಂದು ತಿಳಿದು ಸಂತ್ರಸ್ತೆಯನ್ನ ರೇವಣ್ಣ, ಭವಾನಿ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿ ಅಪಹರಿಸಿದ್ದರು. ಬಳಿಕ ಆಕೆಯನ್ನು ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಇದೇ ಅಪಹರಣ ಪ್ರಕರಣದಿಂದಲೇ ರೇವಣ್ಣ ಸೇರಿದಂತೆ 8 ಜನ ಜೈಲಿಗೆ ಹೋಗಿದ್ದರು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಆನಂತರ ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ, ಆಕೆಯ ಹೇಳಿಕೆ ದಾಖಲು ಮಾಡಿ ಪ್ರಕರಣ ದಾಖಲಿಸಿತ್ತು. ಹೇಳಿಕೆಯ ಮೇಲೆ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋವೊಂದು ಪತ್ತೆಯಾಗಿತ್ತು. ಇದು ಪ್ರಕರಣದ ಬಹುದೊಡ್ಡ ಸಾಕ್ಷ್ಯವಾಗಿ ಪರಿಣಮಿಸಿತು. ಕೊನೆಗೆ ಎಫ್‌ಎಎಲ್ ಮೂಲಕ ವಿಡಿಯೋ ತುಣುಕಿನಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದು ಸಾಬೀತಾಗಿತ್ತು.

ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳಿದ್ದ ಪೆನ್ ಡ್ರೈವ್‌ಗಳನ್ನ ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು. ಬಳಿಕ ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ಪ್ರಕರಣ ಸಂಬಂಧ 2024ರ ಮೇ. 31ರಂದು ಪ್ರಜ್ವಲ್ ರೇವಣ್ಣ ಅವರನ್ನ ಪೊಲೀಸರು ಬಂಧಿಸಿದ್ದರು.

Megha
the authorMegha

Leave a Reply

error: Content is protected !!