NEWSVideosನಮ್ಮಜಿಲ್ಲೆನಮ್ಮರಾಜ್ಯ

ನಮ್ಮ ಬೇಡಿಕೆ ಈಡೇರದೆ ಹೋದಲ್ಲಿ ಉಗ್ರ ಹೋರಾಟಕ್ಕೆ ಸಿದ್ಧ: BMTC & KSRTC ಸಂಘದ ಅಧ್ಯಕ್ಷ ನಂಜುಂಡೇಗೌಡ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿ ₹7500, ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಇಪಿಎಸ್ ನಿವೃತ್ತರಿಗೆ, ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ ₹5000 ಕೂಡಲೇ ನೀಡಬೇಕೆಂದು ಆಗ್ರಹಿಸಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತರ ಟ್ರಸ್ಟ್ ಪ್ರತಿಭಟನೆ ನಡೆಸಿತು.

“ನಿಧಿ ಅಪ್ಕೆನಿಕಟ್” ಕಾರ್ಯಕ್ರಮ ಅಂಗವಾಗಿ ನಿನ್ನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇಪಿಎಸ್ ಪಿಂಚಣಿದಾರರ 27ನೇ ಬೃಹತ್ ಪ್ರತಿಭಟನೆ ನಡೆಯಿತು.

ಈ ವೇಳೆ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಯೊಂದಿಗೆ ಮನವಿ ಪತ್ರವನ್ನು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ (minister for labour & employment) ಸಚಿವರಾದ ಮುನ್ಸೂಕ್ ಮಾಂಡವೀಯ ಹಾಗೂ ಶೋಭಾ ಕರಂದ್ಲಾಜೆಯವರಿಗೆ ಈ ದಿನವೇ ಕಳುಹಿಸಿಕೊಡಬೇಕೆಂದು ಅಧಿಕಾರಿಗಳಿಗೆ ನೀಡಲಾಯಿತು.

ಬಳಿಕ ಸಂಘದ ಅಧ್ಯಕ್ಷ ನಂಜುಂಡೇಗೌಡ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಜುಲೈ 22ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಲಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ನಾವು ಉಗ್ರ ಹೋರಾಟಕ್ಕೆ ಸಿದ್ದ ಎಂಬ ಸಂದೇಶವನ್ನು ನೀಡಿದರು.

ಎನ್ಎಸಿ ಮುಖ್ಯ ಸಂಯೋಜಕ ರಮಾಕಾಂತ್ ನರಗುಂದ ಮಾತನಾಡಿ, ಕಮಾಂಡರ್ ಶೋಕ್ ರಾವತ್ ಹಾಗೂ ಇತರೆ ಮುಖಂಡರ ಜತೆಗೂಡಿ, ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರನ್ನು ಭೇಟಿ ಮಾಡಿ, ಇಪಿಎಸ್ ನಿವೃತ್ತರ ಬೇಡಿಕೆಗಳ ಸಂಬಂಧ ಕೈಗೊಂಡ ಎಲ್ಲ ಮಾಹಿತಿಯನ್ನು ಪ್ರತಿಭಟನಾ ನಿರತರಿಗೆ ನೀಡಿದರು.

ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ಇಪಿಎಸ್ ನಿವೃತ್ತರು ತೀವ್ರ ಸಂಕಷ್ಟದಲ್ಲಿದ್ದು, ಕಳೆದೊಂದು ದಶಕದಿಂದ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ನಾವೆಲ್ಲರೂ ಅತ್ಯಂತ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತಿದ್ದರೂ ಸಹ ಇದುವರವಿಗೂ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಟ್ರಸ್ಟಿನ ಅಧ್ಯಕ್ಷರಾದ ಬ್ರಹ್ಮಚಾರಿ, ವೇಲೂರು ಅಮರ್, ಶ್ರೀನಿವಾಸ ನಾಯ್ಡು, ಡಿಸ್ಕೋ ಶ್ರೀನಿವಾಸ್, ಸೂಣ್ಣಪ್ಪ ಹಾಗೂ ಇನ್ನೂ ಹಲವಾರು ಮುಖಂಡರು, ಎನ್ಎಸಿ ಖಜಾಂಚಿ ಕುಲಕರ್ಣಿ ಮಾತನಾಡುವವರಿದ್ದರು. ಆದರೆ ಸ್ಥಳೀಯ ಪೊಲೀಸರು ತಮ್ಮ ಮೇಲಧಿಕಾರಿಗಳಿಂದ ಸಂದೇಶ ಬಂದಿದೆ ಹಾಗಾಗಿ ಈ ಸಭೆಯನ್ನು ಬೇಗನೆ ಮುಕ್ತಾಯಗೊಳಿಸಿ ಎಂದು ಮನವಿ ಮಾಡಿದ್ದರಿಂದ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಈ ಅನಿರೀಕ್ಷಿತ ಬೆಳವಣಿಗೆಗೆ ನಂಜುಂಡೇಗೌಎ ವಿಷಾದ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಸಂಘದ ಖಜಾಂಚಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಸ್ವಾಗತಿಸುವ ಮೂಲಕ ಚಾಲನೆ ನೀಡಿದರು. ಸಂಘದ ಪದಾಧಿಕಾರಿಯಾದ ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಟ್ರಸ್ಟ್ ಖಜಾಂಚಿ, ರಮೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Megha
the authorMegha

Leave a Reply

error: Content is protected !!