ತಿ.ನರಸಿಪುರ: ಬರಗಾಲದ ಬೇಗೆಯಲ್ಲಿ ಬಳಲುತ್ತಿರುವ ರೈತರು ಜಾನುವಾರುಗಳಿಗೆ ಕುಡಿಯುವ ನೀರು ಮೇವು ಸಿಗುತ್ತಿಲ್ಲ ಎಂದು ಗೋಳಿಡುತ್ತಿದ್ದಾರೆ. ಇಂಥ ಸಮಸ್ಯೆ ನೀಗಿಸಲಾಗದವರು ಹಳ್ಳಿಗಳಲ್ಲಿ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಛೀ ಮಾರಿ ಸ್ವಾಗತ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರದ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇಂದು ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸೇರಿದಂತೆ ಮೈಸೂರು ಜಿಲ್ಲೆ ಹಾಗೂ ತಾಲೂಕಿನಲ್ಲಿ ಬರಗಾಲ ಕಾಡುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು, ದನಗಳಿಗೆ ಮೇವು ಸಿಗುತ್ತಿಲ್ಲ. ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ದೊಂಬರಾಟ ಆಡುತ್ತಿವೆ. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿದ್ದಾರೆ. ರೈತರು ಸೊರಗುತ್ತಿದ್ದಾರೆ.
ಇನ್ನು ಪ್ರತಿಭಟನೆ ಮಾಡಿ ಕಬಿನಿ, ಕಾವೇರಿ ನಾಲೆಗಳಲ್ಲಿ ನೀರು ಹರಿಸುವಂತೆ ಒತ್ತಾಯಿಸಿದರೂ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಹಳ್ಳಿಗಳಿಗೆ ಮತ ಕೇಳಲು ಬರುವ ರಾಜಕೀಯ ಪಕ್ಷಗಳಿಗೆ ಛೀಮಾರಿ ಹಾಕಿ ಸಮಸ್ಯೆ ಗಮನ ಸೆಳೆಯಿರಿ ಎಂದು ಕರೆ ನೀಡಿದ್ದಾರೆ.
ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ಕಬ್ಬು, ಬಾಳೆ ಬೆಳೆಗಳು ಒಣಗುತ್ತಿವೆ. ಇಂಧನ ಇಲಾಖೆ ರೈತರನ್ನು ಕಗ್ಗತ್ತಲ್ಲಿನಟ್ಟಿದೆ. ದೇಶದಲ್ಲಿ ಶೇ.70ರಷ್ಟು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಬೆಲೆ ನಿಗದಿ ಮಾಡಿ ಎಂದರೆ ರೈತರ ಮೇಲೆ ಗೋಲಿಬಾರ್ ಮಾಡುತ್ತಾರೆ. ಆದರೆ ಶೇ.2 ರಷ್ಟು ಇರುವ ಸರ್ಕಾರಿ ನೌಕರರಿಗೆ ಶೇ.58 ರಷ್ಟು ಸಂಬಳ ಏರಿಕೆ ಮಾಡಬೇಕು ಎನ್ನುವ ವರದಿ ಸಲ್ಲಿಸುತ್ತಾರೆ. ಇಂತಹ ಪುರುಷಾರ್ಥಕ್ಕೆ ರೈತರು ಎಂಪಿಗಳನ್ನ ಗೆಲ್ಲಿಸಬೇಕೆ ಎಂದು ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ವರ್ಷಾನುಕಾಲ ಹೋರಾಟ ಮಾಡಿದ ರೈತರ ಒತ್ತಾಯಕ್ಕೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿ ಮಾಡುತ್ತೇವೆ. ಸಾಲ ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಿದೆ. ಈ ಬಗ್ಗೆ ಬಿಜೆಪಿ ಅಥವಾ ಪ್ರಧಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡದಿದ್ದರೆ ದೇಶದ ರೈತರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ ಎಂದರು.
ದೇಶದಲ್ಲಿ ಅನ್ನ ನೀಡುವ ರೈತನನ್ನು ಅನಾಥರಾಗಿ ಮಾಡಬಾರದು. ಅನ್ನದಾತರು ದೇಶಕ್ಕೆ ಆಶ್ರಯದಾತರಾಗಬೇಕು. ಬರಗಾಲದ ಸಂಕಷ್ಟದಲ್ಲಿರುವ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿ 150 ರೂ. ಹಣ ಕೊಟ್ಟಿಲ್ಲ ಎಂದು ಪ್ರಶ್ನಿಸಿದರೂ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೇ ಸಕ್ಕರೆ ಕಾರ್ಖಾನೆಯವರು ಅನ್ಯಾಯ ಮಾಡುತ್ತಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಗ್ಯಾರಂಟಿ ಗುಂಗಿನಲ್ಲಿ ತೇಲಾಡುತ್ತಿದೆ. ರೈತರು ಬಲಿ ಪಶುಗಳಾಗುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಚುನಾವಣೆ ಗುಂಗಿನಲ್ಲಿ ನಿರತರಾದರೆ ರೈತರ ಗತಿ ಏನು? ರೈತರ ಸಂಕಷ್ಟ ರಾಜಕೀಯ ಪಕ್ಷಗಳಿಗೆ ಅರಿವಾದರೆ, ರೈತರಿಗೆ ನ್ಯಾಯ ಸಿಗಲು ಸಾಧ್ಯ ಅದಕ್ಕಾಗಿ ಹಳ್ಳಿಗಳಲ್ಲಿ ಛೀಮಾರಿ ಸ್ವಾಗತ ಮಾಡುತ್ತೇವೆ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯಕ, ತಾಲೂಕು ಉಪಾಧ್ಯಕ್ಷ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ, ತಾಲೂಕು ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಟೌನ್ ಅಧ್ಯಕ್ಷ ಅಪ್ಪಣ್ಣ, ತರಕಾರಿ ಲಿಂಗರಾಜು, ವಾಚ್ ಕುಮಾಋ, ಗೌರಿಶಂಕರ್ ಕುರುಬೂರು ಇತರರು ಇದ್ದರು.