NEWSನಮ್ಮಜಿಲ್ಲೆ

ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೂ ಆಸನ ಮೀಸಲಿಡಿ: ಸಾರಿಗೆ ಸಚಿವರಿಗೆ ಎಂಬಿಪಿ ಮನವಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಆಸನ ಮೀಸಲಿಟ್ಟಿರುವ ಮಾದರಿಯಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಆಸನ ಮೀಸಲಿಡಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದರು.

ನಗರದ ದರ್ಬಾ‌ರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 102 ನೂತನ ನಗರ ಸಾರಿಗೆ ಬಸ್‌ಗಳನ್ನು ಲೋಕಾರ್ಪಣೆಗೊಳಿಸಿದ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯು ಆಡಳಿತವಾಗಿ ಬೆಳಗಾವಿ ವಿಭಾಗಕ್ಕೆ ಸೇರಿದ್ದರೂ ಸಹ ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸೇರ್ಪಡೆಯಾಗಿದೆ. ಇದರಿಂದ ವಿಜಯಪುರ ಜಿಲ್ಲೆಗೆ ಸಾಮಾನ್ಯ ಅನುದಾನದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಮಲಿಂಗಾರೆಡ್ಡಿ ಅವರನ್ನು ಕೋರಿದ ಅವರು, ಜಿಲ್ಲೆಯ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸಾಮಾನ್ಯ ಅನುದಾನ ಒದಗಿಸಿ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, 225 ವಿದ್ಯುತ್ ಚಾಲಿಲಿತ ಸ್‌ಗಳನ್ನು ಖರೀದಿಸಲಾಗುತ್ತಿದ್ದು, ಈ ಪೈಕಿ ಕಲಬುರ್ಗಿಗೆ 100, ವಿಜಯಪುರಕ್ಕೆ 75 ಹಾಗೂ ಬಳ್ಳಾರಿಗೆ 50 ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ಮುಂದಿನ ಎರಡು ತಿಂಗಳಲ್ಲಿ 20 ನಾನ್ ಎಸಿ ಸ್ವೀಪರ್, 20 ಎಸಿ ಸ್ಪೀಪರ್ ಹಾಗೂ 16 ಎ.ಸಿ. ಸೀಟರ್ ಸೇರಿದಂತೆ ಒಟ್ಟು 56 ಹೊಸ ವಾಹನಗಳ ಖರೀದಿಗೆ ಆದೇಶ ಹೊರಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಂತ-ಹಂತವಾಗಿ ಬಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಇದರಿಂದ ನಗರದಿಂದ ನಗರಗಳಿಗೆ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಕೆಕೆಆರ್‌ಟಿಸಿ 400 ಬಸ್‌ಗಳ ಖರೀದಿ ಪ್ರಕ್ರಿಯೆ ಜಾರಿಯಲ್ಲಿದ್ದು, ಮುಂದಿನ ಎರಡೂರು ತಿಂಗಳಲ್ಲಿ ಟೆಂಡ‌ರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದ ಅವರು, ರಾಜ್ಯದಲ್ಲಿ ನಗರಗಳ ವ್ಯಾಪ್ತಿ ವೃದ್ಧಿಸುತ್ತಿದೆ. ಬೆಳೆಯುತ್ತಿರುವ ನಗರಗಳಲ್ಲಿನ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಸುಸಜ್ಜಿತ ಮತ್ತು ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚುವರಿ 112 ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಇನ್ನು ಪ್ರಸ್ತುತವಾಗಿ ನೂತನ 102 ಹೊಸ ನಗರ ಸಾರಿಗೆ ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಇದರಲ್ಲಿ 27 ಬಸ್‌ಗಳು ವಿಜಯಪುರ ವಿಭಾಗಕ್ಕೆ ಹಂಚಿಕೆಯಾಗಿದೆ ಎಂದು ಹೇಳಿದರು.

ಈಗಾಗಲೇ ನಾವು ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ಒಂದು ಸಾವಿರ ಹಾಗೂ ನೇರ ನೇಮಕಾತಿಯಲ್ಲಿ 9000 ಸೇರಿದಂತೆ ಒಟ್ಟು 10 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Megha
the authorMegha

Leave a Reply

error: Content is protected !!