ಬೆಂಗಳೂರು: ನಗರದ ಹಲಸೂರು ಕೆರೆಯ ಸಮೀಪದ ಕೆನ್ನಿಂಗ್ಟನ್ ಜಂಕ್ಷನ್ ಬಳಿ ಕುಸಿದಿದ್ದ ಬಿಬಿಎಂಪಿ ವೈಟ್ ಟಾಪಿಂಗ್ ರಸ್ತೆಯನ್ನು ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗದ ಕಾರ್ಯ ಪಾಲಕ ಅಭಿಯಂತರ ನಿರಂಜನ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು.
ವೈಟ್ ಟಾಪಿಂಗ್ ರಸ್ತೆ ಕುಸಿತಕ್ಕೆ ಸಂಬಂಧಪಟ್ಟಂತೆ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತ್ತು. ಈ ಸಂಬಂಧ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಡಾ. ಸತೀಶ್ ಕುಮಾರ್ ನೀಡಿದ ದೂರು ದಾಖಲಿಸಿಕೊಂಡ ಲೋಕಾಯುಕ್ತ ಇಲಾಖೆ, ಗುಂಡಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಗುಣಮಟ್ಟ ಪರಿಶೀಲನೆ ನಡೆಸಿದೆ.
ಪರಿಶೀಲನೆ ಬಳಿಕ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಮೋಹನ್, ಜನರ ಹಣ ಪೋಲಾಗುತ್ತಿರುವುದನ್ನು ಮನಗಂಡು ನಾವು ಲೋಕಾಯುಕ್ತರಿಗೆ ದೂರು ನೀಡಿದ್ದೆವು. ನಮ್ಮ ದೂರಿಗೆ ಸ್ಪಂದಿಸಿದ ಲೋಕಾಯುಕ್ತರು ಸ್ಥಳಕ್ಕೆ ಆಗಮಿಸಿ ಗುಣಮಟ್ಟವನ್ನು ಪರಿಶೀಲನೆ ಮಾಡಿದ್ದಾರೆ ಎಂದರು.
ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್‌ರವರು ವಾಹಿನಿಯೊಂದಕ್ಕೆ ಹೇಳಿಕೆ ನೀಡುವ ಸಂದರ್ಭದಲ್ಲಿ ರಸ್ತೆ ಕೆಳಗಡೆ ಪೈಪ್‌ಲೈನ್ ಹೋಗಿದೆ ನೀರು ಸೋರಿಕೆಯಾಗಿ ರಸ್ತೆ ಕುಸಿದಿದೆ ಎಂದಿದ್ದರು. ಆದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧಿಕಾರಿಗಳು ಇಲ್ಲಿ ಹಾಜರಿದ್ದು, ಯಾವುದೇ ಪೈಪ್‌ಲೈನ್ ಹೋಗಿಲ್ಲ, ಇಲ್ಲಿ ಆಗಿರುವುದಕ್ಕೆ ನಾವು ಜವಾಬ್ದಾರರಲ್ಲ ಎನ್ನುತ್ತಿದ್ದಾರೆ. ಇಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಯಾರೇ ಭ್ರಷ್ಟಾಚಾರ ಮಾಡಿದ್ದರೂ ನಾವು ಪಾಠ ಕಲಿಸದೇ ಬಿಡುವುದಿಲ್ಲ ಎಂದು ಡಾ. ಸತೀಶ್ ಮೋಹನ್ ಹೇಳಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಮೋಹನ್, ವಿಶ್ವನಾಥ್, ಅಶೋಕ್ ಮೃತ್ಯುಂಜಯ, ಮರಿಯ ಸೇರಿದಂತೆ ಇನ್ನಿತರ ನಾಯಕರುಗಳು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಇದ್ದರು.