ಬೆಂಗಳೂರು: ರಾಜ್ಯದ 38ನೇ ಡಿಜಿಪಿ ಮತ್ತು ಐಜಿ ಓಂ ಪ್ರಕಾಶ್ ಅವರ ಹತ್ಯೆ ಇಂದು ನಡೆದಿದ್ದು, ಈ ನಿವೃತ್ತ ಐಪಿಎಸ್ ಅಧಿಕಾರಿ ಅವರ ಪತ್ನಿಯಿಂದಲೇ ಕೊಲೆಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ನಿವೃತ್ತ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರು 10 ದಿನಗಳ ಹಿಂದೆ ಪತ್ನಿ ಪಲ್ಲವಿ ಜೊತೆ ಜಗಳವಾಡಿಕೊಂಡಿದ್ದರು, ಹೀಗಾಗಿ ಕೌಟುಂಬಿಕ ಕಲಹದಿಂದಾಗಿ ಈ ಕೊಲೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಚಾಕುವಿನಿಂದ ಇರಿದು ಕೊಲೆ ಮಾಡಿರಬಹುದು ಎಂದು ಹೇಳಲಾಗುತ್ತಿದ್ದು, ಒಂದು ವಾರದ ಹಿಂದೆ ಪಲ್ಲವಿ ಐಪಿಎಸ್ ಅಧಿಕಾರಿಗಳಿಗೆ ಸಂದೇಶ ಕಳುಹಿಸಿದ್ದರು. ತನ್ನ ಪತಿ ತನ್ನನ್ನು ಮತ್ತು ಮಗಳನ್ನು ತುಂಬಾ ಹಿಂಸಿಸುತ್ತಿದ್ದಾರೆ. ಇವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದು, ಓಂ ಪ್ರಕಾಶ್ ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಿದ್ದರು.
ಅಲ್ಲದೆ ಓಂ ಪ್ರಕಾಶ್ಅವರು ಮನೆಯಲ್ಲಿ ಬಂದೂಕನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅವರು ಯಾವುದೇ ಕ್ಷಣದಲ್ಲಾದರೂ ನಮ್ಮನ್ನು ಕೊಲ್ಲಬಹುದು. ಆದ್ದರಿಂದ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಪಲ್ಲವಿ ವಿನಂತಿಸಿದ್ದರು.
ಈ ಎಲ್ಲ ಬೆಳವಣಿಗೆಯ ನಡುವೆ ಇಂದು ಓಂ ಪ್ರಕಾಶ್ ಅವರ ಹತ್ಯೆಯಾಗಿದ್ದು, ಆ ಬಳಿಕ ಪೊಲೀಸರು ಅವರ ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Related









