ನಿವೃತ್ತ ನೌಕರರ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ಮಾ.15ರೊಳಗೆ ಬಗೆಹರಿಸುವ ವಾಗ್ದಾನ: BMTC & KSRTC ನಂಜುಂಡೇಗೌಡ
ಬೆಂಗಳೂರು: ಕೇಂದ್ರ ಸರ್ಕಾರ ನಿವೃತ್ತ ನೌಕರರ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಯನ್ನು ಮಾರ್ಚ್ 15ರೊಳಗೆ ಸೌಹಾರ್ದಯುತವಾಗಿ ಬಗೆಹರಿಸಿ ಕೊಡುವುದಾಗಿ ವಾಗ್ದಾನ ಮಾಡಿದ ಹಿನ್ನೆಲೆಯಲ್ಲಿ ಇದೇ ಫೆ. 15ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಇಪಿಎಸ್ ಪಿಂಚಣಿದಾರರ ಪ್ರತಿಭಟನೆಯನ್ನು ಕೈ ಬಿಡಲಾಗಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಇಪಿಎಸ್ ನಿವೃತ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಮ್ಮ ನಾಯಕರಾದ ಕಮಾಂಡರ್ ಅಶೋಕ್ ರಾವುತ್ ಹಾಗೂ ಇತರೆ ನಾಯಕರಿಗೆ ಬೆಂಬಲ ಸೂಚಿಸುವ ಸಲುವಾಗಿ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಫೆ.15ರ ಗುರುವಾರದಂದು, ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇಪಿಎಸ್ ನಿವೃತ್ತರ ಪ್ರತಿಭಟನೆ ನಡೆಸಲು ಇತ್ತೀಚೆಗೆ ನಡೆದ ಲಾಲ್ ಬಾಗ್ ಮಾಸಿಕ ಸಭೆಯಲ್ಲಿ ನಿರ್ಣಯಿಸಲಾಗಿತ್ತು.
ಈ ಮಧ್ಯೆ ಉಪವಾಸ ನಿರತ ನಮ್ಮ ಮುಖಂಡರನ್ನು ಕೇಂದ್ರ ಸರ್ಕಾರದ ಉನ್ನತ ಸಚಿವರ ಸೂಚನೆಯ ಮೇರೆಗೆ ಮಥುರ ಲೋಕಸಭೆ ಸದಸ್ಯರಾದ ಹೇಮಮಾಲಿನಿ ಹಾಗೂ ಇಪಿಎಫ್ಒ ಉನ್ನತ ಮಟ್ಟದ ಅಧಿಕಾರಿಗಳು ಮುಖಂಡರ ಮುಷ್ಕರವನ್ನು ಕೈಬಿಡಿಸಿ, ಸಂಧಾನದ ಮೂಲಕ ನಿಮ್ಮ ಎಲ್ಲ ಬೇಡಿಕೆಗಳನ್ನು ಈ ಬಾರಿ ಸೌಹಾರ್ದಯುತವಾಗಿ ಬಗೆಹರಿಸಿಕೊಡುತ್ತೇವೆ ಎಂದು ಆಹ್ವಾನಿಸಿದ್ದು, ಅದರಂತೆ ನಮ್ಮ ನಾಯಕರು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಯನ್ನು ಬರುವ ಮಾರ್ಚ್ 15 ರೊಳಗೆ ಸೌಹಾರ್ದಯುತವಾಗಿ ಬಗೆಹರಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದು, ಹಾಗಾಗಿ ಫೆ.15 ರಂದು ನಮ್ಮ ಉದ್ದೇಶಿತ ಪ್ರತಿಭಟನೆಯನ್ನು ಕೈ ಬಿಡಲಾಗಿದೆ ಎಂದು ವಿವರಿಸಿದ್ದಾರೆ.
ಇಪಿಎಸ್ ನಿವೃತ್ತರ ಬಗ್ಗೆ ಕೇಂದ್ರ ಸರ್ಕಾರದ ಧೋರಣೆ ಎಷ್ಟರಮಟ್ಟಿಗಿದೆ ಎಂಬುದಕ್ಕೆ ಒಂದು ಉದಾಹರಣೆ, ಇದೇ ಫೆ. 7 ಹಾಗೂ 8 ರಂದು ಕರ್ನಾಟಕ ಹಾಗೂ ಕೇರಳ ರಾಜ್ಯದ ಶಾಸಕರು ತಮ್ಮ ಧರದ್ಧಿಗಾಗಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡಿ, ಉಪವಾಸ ಮುಷ್ಕರ ನಿರತ ನಮ್ಮ ಮುಖಂಡರನ್ನು ಮೈದಾನದಿಂದ ಹೊರ ಹಾಕಿ ಅವರಿಗೆ ಅವಕಾಶ ನೀಡಿರುವುದು ಎಷ್ಟು ಸರಿ?.
ಕಳೆದ ವಾರ ಶಿವರಾಮನ್ ಎಂಬ ಕೇರಳ ರಾಜ್ಯದ ನಿವೃತ್ತ ನೌಕರನ ಪಿಂಚಣಿಯನ್ನು ವಿನಾಕಾರಣ ಇಪಿಎಫ್ಒ ಅಧಿಕಾರಿಗಳು 9 ವರ್ಷಗಳಿಂದ ನೀಡದೆ ಇದ್ದು, ಆತ ಮಾನಸಿಕ ಒತ್ತಡಕ್ಕೆ ಒಳಗಾಗಿ, ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡ. ಇನ್ನು ಒರಿಸ್ಸಾದ 73 ವರ್ಷದ ಮಹಿಳೆ ಸಹ ಇದೇ ಕಾರಣಕ್ಕೆ ಮೃತರಾಗಿದ್ದಾರೆ. ಇವೆಲ್ಲವೂ ದೊಡ್ಡ ಸುದ್ದಿಯಾಗುವುದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ವಾರ ಜರುಗಿದ ಪಾರ್ಲಿಮೆಂಟ್‌ನ ಮಧ್ಯಕಾಲಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವರು ನಿವೃತ್ತರ ಕನಿಷ್ಠ ಹೆಚ್ಚುವರಿ ಪಿಂಚಣಿ ಬಗ್ಗೆ ಪ್ರಸ್ತಾವನೆ ಮಂಡಿಸುವ ಮೂಲಕ ಪರಿಹಾರ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಪಾರ್ಲಿಮೆಂಟ್ ಪ್ರಶ್ನೋತ್ತರ (questionnaire) ಕಾರ್ಯಕ್ರಮದಲ್ಲಿ ಇಪಿಎಸ್ ನಿವೃತ್ತರ ಬಗ್ಗೆ ಸಂಸದರಾದ ಸುಪ್ರಿಯಾ ಸೂಲೆ ಹಾಗೂ ಪ್ರೇಮಚಂದ್ರಚಂದ್ರನ್ ಅವರು ಮಂಡಿಸಿದ ಅಹವಾಲು ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರ (minister for labour & employment) ಕಿವಿಗೆ ಬೀಳಲೇ ಇಲ್ಲ.
ಇದೇ ಫೆ. 10ರ ಶನಿವಾರದಂದು 235ನೇ ಸಿಬಿಟಿ ಸಭೆ ದೆಹಲಿಯಲ್ಲಿ ಜರುಗಿದ್ದು, ಕೇಂದ್ರ ಕಾರ್ಮಿಕ ಇಲಾಖೆಯು ಇಪಿಎಸ್ ಪಿಂಚಣಿದಾರರಿಗೆ ನೀಡುತ್ತಿರುವ ಮಾಸಿಕ ಪಿಂಚಣಿ ರೂ 1000 ದಿಂದ ರೂ 2,000 ಕ್ಕೆ ಹೆಚ್ಚುವರಿ ಮಾಡಬೇಕೆಂಬ ಪ್ರಸ್ತಾವನೆಯನ್ನು ಕೂಡ ತಿರಸ್ಕರಿಸಲಾಗಿದೆ ಎಂಬುದನ್ನು ತಿಳಿದು ಇಪಿಎಸ್ ನಿವೃತ್ತರು ತೀವ್ರ ನಿರಾಸೆಗೊಂಡಿದ್ದಾರೆ ಎಂದರು.
ನಿಧಿ ಅಪ್ಕೆ ನಿಕಟ್ ಕಾರ್ಯಕ್ರಮವನ್ನು ಇಪಿಎಫ್ಒ ಅಧಿಕಾರಿಗಳು ಪ್ರತಿ ತಿಂಗಳ 27 ನೇ ತಾರೀಖಿನಂದು ನಡೆಸುತ್ತಿದ್ದು, ನಿವೃತ್ತರ ಯಾವುದೇ ಕುಂದು ಕೊರತೆಗಳನ್ನು/ ಬೇಡಿಕೆಗಳನ್ನು ಈಡೇರಿಸದ ಇವರು ಯಾವ ಪುರುಷಾರ್ಥಕ್ಕಾಗಿ ಈ ರೀತಿಯ ಸಭೆಯನ್ನು ನಡೆಸುತ್ತಾರೆ?. ಇಪಿಎಫ್ಓ ಕಚೇರಿ ಆವರಣದಲ್ಲಿ ಹತ್ತಾರು ಪ್ರತಿಭಟನೆಗಳನ್ನು ಮಾಡಿ ಮನವಿ ಪತ್ರಗಳನ್ನು ನಮ್ಮ ಸಂಘಟನೆಯ ವತಿಯಿಂದ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರಗಳು ಏನಾದವು? ನಿವೃತ್ತರ ಯಾವ ಕುಂದು ಕೊರತೆಗಳನ್ನು ಬಗೆಹರಿಸಿದ್ದೀರಿ? ಇವೆಲ್ಲವನ್ನು ಪ್ರಶ್ನಿಸಲು 27/02/2024 ರಂದು ನಗರದ ಇಪಿಎಫ್ಒ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿವರಿಸಿದರು.
ಸೆಪ್ಟೆಂಬರ್ 1, 2014 ಪೂರ್ವ ನಿವೃತ್ತರಾದವರು ಈ ಕೂಡಲೇ ಎಚ್ಚೆತ್ತುಕೊಳ್ಳದೆ ಹೋದಲ್ಲಿ/ ಪ್ರತಿಭಟನೆಯಲ್ಲಿ ಭಾಗವಹಿಸದೆ ಹೋದಲ್ಲಿ, ಈ ಅಧಿಕಾರಿಗಳು ನಿವೃತ್ತರಿಗೆ ವಿದಾಯ ಹೇಳಲು ಹವಣಿಸುತ್ತಿದ್ದಾರೆ. ಕನಿಷ್ಠ ಹೆಚ್ಚುವರಿ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಅದಕ್ಕೆ ನಾವು ಸದಾ ಬದ್ಧರಾಗಿದ್ದೇವೆ ಎಂದು ನಂಜುಂಡೇಗೌಡ ಹೇಳಿದ್ದಾರೆ.