NEWSನಮ್ಮಜಿಲ್ಲೆನಮ್ಮರಾಜ್ಯ

ನಿವೃತ್ತರಿಗೆ ಮತ್ತೊಮ್ಮೆ ಕವಿದ ನಿರಾಸೆಯ ಕಾರ್ಮೋಡ, ತಾಳ್ಮೆಯಿದ್ದಲ್ಲಿ ಜಯ ಶತಸಿದ್ಧ : BMTC-KSRTC ಸಂಘದ ನಂಜುಂಡೇಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರತಿ ವರ್ಷವೂ ನಡೆಯುವ ಬಜೆಟ್, ಮುಂಗಾರು ಹಾಗೂ ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನದಲ್ಲಿಯಾದರು ಸಂಸದರು ಬಿಗಿಪಟ್ಟು ಹಿಡಿದು, ಇಪಿಎಸ್ ನಿವೃತ್ತರ ಮೂಲಭೂತ ಬೇಡಿಕೆ 7500 ರೂ. ಹಾಗೂ ಭತ್ಯೆ ಬರುವಂತೆ ಮಾಡುತ್ತಾರೆ ಎಂದು ಚಾತಕ ಪಕ್ಷೀಯಂತೆ ಕಾಯುತ್ತಿದ್ದ ನಿವೃತ್ತರಿಗೆ ಮತ್ತೊಮ್ಮೆ ನಿರಾಸೆಯ ಕಾರ್ಮೋಡ ಕವಿದಿದೆ ಎಂದು ಇಪಿಎಸ್-95 ಪಿಂಚಿಣಿದಾರರು ಬೇಸರ ವ್ಯಕ್ತಪಡಿಸಿದರು.

ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಭಾನುವಾರ ಲಾಲ್ ಬಾಗ್ ಆವರಣದಲ್ಲಿ ಆಯೋಜಿಸಿದ್ದ ಇಪಿಎಸ್ -95 ಪಿಂಚಿಣಿದಾರರ 96ನೇ ಮಾಸಿಕ ಸಭೆ ಯಶಸ್ವಿಯಾಗಿ ಜರುಗಿತು.

ಮೈ ಕೊರೆಯುವ ಈ ಚಳಿಯನ್ನು ಲೆಕ್ಕಿಸದೆ ಎಂದಿನಂತೆ ಬಂದ ಸಂಜೆಯ ಮಬ್ಬಿನಲ್ಲಿರುವ ನವತರುಣ ನಿವೃತ್ತ ನೌಕರರು ತಮಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದರು. ಈ ವೇಳೆ ದೇಶಾದ್ಯಂತ ಇರುವ ಇಪಿಎಸ್ ಪಿಂಚಣಿದಾರರು ತಮ್ಮ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಳೆದೊಂದು ದಶಕದಿಂದ ನಡೆಸಿದ ಹೋರಾಟಕ್ಕೆ ಯಾವುದೇ ಪ್ರತಿಫಲ ದೊರೆಯದೇ ಇರುವುದಕ್ಕೆ ಈ ಎಲ್ಲ ಸದಸ್ಯರು ತಮ್ಮ ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು: ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನಮ್ಮ ಎಲ್ಲ ಸಂಘಟನೆಗಳ ಸದಸ್ಯರು ಸೇರಿ, ಮತ್ತೊಂದು ಮನವಿ ಪತ್ರವನ್ನು ಅವರ ಕಚೇರಿಯಲ್ಲಿ ನೀಡಿ, ಮುಂಬರುವ ಸಿಬಿಟಿ ಸಭೆಯಲ್ಲಿ, ನಮ್ಮ ಬಹುದಿನಗಳ ಬೇಡಿಕೆಯ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡು, ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು, ಸಚಿವರಲ್ಲಿ ಮನವಿ ಮಾಡಲು ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಲಾಯಿತು.

ಅಧಿಕ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪಿನ ಬಗ್ಗೆ ಪರಾಮರ್ಶೆ ನಡೆಸಿ, ನ್ಯಾಯಾಲಯಗಳ ತೀರ್ಪುಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ, ಪಿಎಫ್ ಕಚೇರಿ ಆವರಣದಲ್ಲಿ ಉಗ್ರ ಪ್ರತಿಭಟನೆ ನಡೆಸಲು ನಿರ್ಣಯಿಸಲಾಯಿತು.

2020ರ ನಂತರ ನಿವೃತ್ತರಾದ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನೌಕರರು ತಮ್ಮ ನಿವೃತ್ತಿಯ ನಂತರ ಸಂಸ್ಥೆಯಿಂದ ತಮಗೆ ಬರಬೇಕಾದ 38 ತಿಂಗಳ ವೇತನ ಪರಿಷ್ಕರಣೆ ಬಾಕಿ, ಪಿಎಫ್, ರಜೆ ನಗರೀಕರಣ ಹಾಗೂ ಹೈಯರ್ ಪಿಂಚಣಿ (higher pension), ಇತ್ಯಾದಿ ಬಾಕಿ ಮೊತ್ತಕ್ಕೆ ಸಂಬಂಧಿಸಿದಂತೆ, ಸಭೆಯಲ್ಲಿ ಸದಸ್ಯರು ದನಿಯೆತ್ತಿದ್ದು, ನಿವೃತ್ತರು ಪ್ರತಿ ಜಿಲ್ಲೆಯಲ್ಲಿಯೂ ತಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಂಡು, ಹೋರಾಟ ಮಾಡಲು ಅವಶ್ಯ ದಾಖಲೆಗಳನ್ನು ಅವರಿಗೆ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಾಸಿಕ ಸಭೆಯನ್ನು ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್ ಅವರು ಎಲ್ಲ ಇಪಿಎಸ್ ನಿವೃತ್ತರನ್ನು ಸ್ವಾಗತಿಸಿದ್ದು, ಸಂಘದ ಅಧ್ಯಕ್ಷ ನಂಜುಂಡೇಗೌಡ ಅವರು ಕಾನೂನಿಗೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ, ನಮ್ಮಲ್ಲಿ ಕಾಯುವ ತಾಳ್ಮೆಯಿದ್ದಲ್ಲಿ, ನ್ಯಾಯಕ್ಕೆ ಇಂದಲ್ಲ, ನಾಳೆ ಜಯ ಶತಸಿದ್ಧ ಎಂದರು.

ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ಉಗ್ರ ಪ್ರತಿಭಟನೆಯಿಂದ ಮಾತ್ರ ಕೇಂದ್ರ ಸರ್ಕಾರವನ್ನು ಮಣಿಸಲು ಸಾಧ್ಯ, ಅದಕ್ಕಾಗಿ ತಾವೆಲ್ಲರೂ ಸಿದ್ಧರಾಗಬೇಕು ಎಂದು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ನಾಗರಾಜು, ಕೃಷ್ಣಮೂರ್ತಿ ಹಾಜರಿದ್ದು, ಅರ್ಥ ಪೂರ್ಣ ಚರ್ಚೆಯೊಂದಿಗೆ, ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

Megha
the authorMegha

Leave a Reply

error: Content is protected !!