NEWS

10 ಲಕ್ಷ ರೂ. ವರದಕ್ಷಿಣೆ, 200 ಗ್ರಾಂ ಬಂಗಾರ ಕೊಟ್ಟರೂ ತೀರದ ದಾಹ- ಕಾರು, ಮನೆಗಾಗಿ ಕಿರುಕುಳ, ಬೇಸತ್ತ ನವವಿವಾಹಿತೆ ಆತ್ಮಹತ್ಯೆ

ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ಮದುವೆ ವೇಳೆ ಲಕ್ಷಗಟ್ಟಲೇ ವರದಕ್ಷಿಣೆ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ತಮ್ಮ ಸಾಮರ್ಥ್ಯಕ್ಕೆ ಮೀರಿ ಎಲ್ಲವನ್ನು ಅಳಿಯನಿಗೆ ಕೊಟ್ಟಿದ್ದರೂ, ಆತ ಹಾಗೂ ಆತನ ಕುಟುಂಬದವರ ದಾಹ ತಣಿದಿರಲಿಲ್ಲ. ಇದರಿಂದ ಬೇಸತ್ತ ನವ ವಿವಾಹಿತೆ ಡೆತ್‌ ನೋಟ್‌ ಬರೆದಿಟ್ಟು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳೆಹೊನ್ನೂರಿನಲ್ಲಿ ನಡೆದಿದೆ.

ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಲತಾ(26) ಎಂಬುವರೆ ಆತ್ಮಹತ್ಯೆ ಮಾಡಿಕೊಂಡವರು. ವೈವಾಹಿಕ ಜೀವನ ಸುಂದರವಾಗಿರುತ್ತದೆ ಎಂದುಕೊಂಡು ಮದುವೆಯಾದ ಏಳು ತಿಂಗಳಲ್ಲೇ ಏಳು ಜನ್ಮಕ್ಕಾಗುವಷ್ಟು ನೋವು, ಯಾತನೆ, ಹತಾಶೆಯನ್ನು ಕಂಡು ಬದುಕಿಗೆ ವಿದಾಯ ಹೇಳಿದ್ದಾಳೆ ಈಕೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಲತಾ ಅವರು ಕಳೆದ ಮೇ 14 ರಂದು ಶಿಕಾರಿಪುರ ತಾಲೂಕಿನ ದಿಂಡದಹಳ್ಳಿಯ ಗುರುರಾಜ್ ಜೊತೆ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು.

ಇನ್ನು ಶಿವಮೊಗ್ಗದ ಭದ್ರಾ ಪ್ರಾಜೆಕ್ಟ್ ನಲ್ಲಿ ಇಂಜಿನಿಯರ್ ಆಗಿದ್ದ ಗುರುರಾಜ್‌ಗೆ ಕೈ ತುಂಬಾ ವರದಕ್ಷಿಣೆ (10 ಲಕ್ಷ ರೂ.), ಸೂಟು, ಬೂಟು, ವಾಚ್, 200 ಗ್ರಾಂ ಬಂಗಾರ ಸೇರಿದಂತೆ ಎಲ್ಲವನ್ನು ಕೊಟ್ಟು ಮುದ್ದಿನ ಮಗಳನ್ನು ಲತಾ ಅವರನ್ನು ಪೋಷಕರು ಧಾರೆ ಎರೆದು ಕೊಟ್ಟಿದ್ದರು. ಮಗಳ ಬಾಳು ಹಸನಾಗಿರಲಿ ಎಂದು ಹಾರೈಸಿದ್ದರು. ಅದೇ ರೀತಿ ಪತಿ ಗುರುರಾಜ್ ಒಳ್ಳೆಯ ವ್ಯಕ್ತಿ ಎಂದೇ ಭಾವಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು ಲತಾ. ಆದರೆ, ಮದುವೆಯಾದ ಕೆಲವೇ ದಿನದಲ್ಲಿ ಪತಿ ಗುರುರಾಜ್ ಹಾಗೂ ಆತನ ಕುಟುಂಬಸ್ಥರ ನಿಜರೂಪ ಬಯಲಾಗಿದೆ.

ಲಕ್ಷಗಟ್ಟಲೇ ವರದಕ್ಷಿಣೆ, ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ಸೇರಿದಂತೆ ತಮ್ಮ ಸಾಮರ್ಥ್ಯಕ್ಕೆ ಮೀರಿ ಎಲ್ಲವನ್ನು ಅಳಿಯನಿಗೆ ಕೊಟ್ಟಿದ್ದರೂ, ಆತ ಹಾಗೂ ಆತನ ಕುಟುಂಬದವರ ಹಣದ ದಾಹ ತಣಿದಿರಲಿಲ್ಲ. ಮತ್ತಷ್ಟು ದುಡ್ಡಿಗೆ ಬೇಡಿಕೆಯಿಟ್ಟಿದ್ದ ಪತಿ ಗುರುರಾಜ್, ಇನ್ನೋವಾ ಕಾರನ್ನು ತರುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ಸರ್ಕಾರಿ ನೌಕರಿಯಿಂದ ನಿವೃತ್ತಿಯಾಗಿದ್ದ ಮಾವ ಹಾಗೂ ಅತ್ತೆ, ಅಳಿಯನ ಅಕ್ಕ ಮತ್ತೀತರರು ಸೇರಿಕೊಂಡು ಕೊಡಬಾರದ ಹಿಂಸೆ ನೀಡಿದ್ದಾರೆ.

ಅದರಲ್ಲೂ ಊಟ, ತಿಂಡಿ, ಬಟ್ಟೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಲತಾ ಅವರಿಗೆ ಕಿರುಕುಳ ಕೊಟ್ಟಿದ್ದಾರೆ. ಆರಂಭದಲ್ಲಿ ಇವೆಲ್ಲವನ್ನು ಸಹಿಸಿಕೊಂಡಿದ್ದ ಲತಾ, ಇಂದಲ್ಲಾ ನಾಳೆ ಎಲ್ಲವೂ ಸರಿಹೋಗುತ್ತೆ ಎಂದು ಭಾವಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಯಾರು ಕೈ ಕೊಟ್ಟರು ಪತಿ ತನ್ನ ಜೊತೆಗೆ ಇರ್ತಾನೆ ಎಂದು ಬಲವಾಗಿ ನಂಬಿದ್ದರು. ಆದರೇ, ಅಪ್ಪ- ಅಮ್ಮ ಹಾಗೂ ಅಕ್ಕನ ಮಾತಿಗೆ ಕುಣಿಯುತ್ತಿದ್ದ ಗುರುರಾಜ್ ವರ್ತನೆ ಸಾಕಷ್ಟು ಬದಲಾಗಿದ್ದನ್ನು ಕಂಡು, ಆಕೆ ಹೇಳ ತೀರಲಾಗದಷ್ಟು ನೋವು ಅನುಭವಿಸಿದ್ದಳು.

ದಿನಕಳೆದಂತೆ ಪತಿ ಗುರುರಾಜ್ ಹಾಗೂ ಆತನ ಕುಟುಂಬಸ್ಥರ ಬದಲಾದ ವರ್ತನೆ ಹಾಗೂ ನಡವಳಿಕೆಯಿಂದ ತುಂಬಾ ನೋವು ಅನುಭವಿಸುತ್ತಿದ್ದ ಲತಾ ಅವರಿಗೆ ಗಂಡನ ಅಕ್ರಮ ಸಂಬಂಧ ಬರ ಸಿಡಿಲಿನಂತೆ ಅಘಾತ ಉಂಟು ಮಾಡಿತ್ತು. ಪತಿ ಗುರುರಾಜ್ ಬೇರೊಬ್ಬಳೊಂದಿಗೆ ಚಾಟಿಂಗ್ & ಡೇಟಿಂಗ್‌ನಲ್ಲಿ ಇರೋದನ್ನ ಮೊಬೈಲ್ ನಿಂದ ಲತಾ ತಿಳಿದುಕೊಂಡಿದ್ದಳಲ್ಲದೇ, ಖುದ್ದಾಗಿ ಕೂಡ ನೋಡಿದ್ದಳು. ಇದೆಲ್ಲವನ್ನು ತನ್ನ ಪೋಷಕರ ಗಮನಕ್ಕೂ ಲತಾ ತಂದಿದ್ದತು.

ಆದರೂ ಪೋಷಕರು, ಬೀಗರಿಗೆ ಕರೆ ಮಾಡಿ, ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ಆದರೇ, ಪತಿ ಹಾಗೂ ಆತನ ಕುಟುಂಬಸ್ಥರ ಬದಲಾಗದ ವರ್ತನೆಯಿಂದ ಬೇಸತ್ತ ಲತಾ ಅಂತಿಮವಾಗಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡರು. ತವರು ಮನೆ ಭದ್ರಾವತಿಯ ಹಂಚಿನಸಿದ್ದಾಪುರಕ್ಕೆ ಬಂದ ಲತಾ, ವಾಟ್ಸಾಪ್ ನಲ್ಲಿ ಡೆತ್ ನೋಟ್ ಮೇಸೆಜ್ ಹಾಕಿ, ಚಪ್ಪಲಿ, ಮೊಬೈಲ್ ಬಿಟ್ಟು, ಕಳೆದ ಸೋಮವಾರ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿಯೇ ಬಿಟ್ಟರು.

ಇತ್ತ ಮನೆಗೆ ಬಂದ ಮಗಳು ನಾಪತ್ತೆಯಾಗಿದ್ದರಿಂದ ಗಾಬರಿಯಾದ ಪೋಷಕರು ಲತಾ ಅವರಿಗಾಗಿ ಸಾಕಷ್ಟು ಹುಡುಕಾಡಿದ್ದಾರೆ. ಅಂತಿಮವಾಗಿ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ನಾಲೆಯ ದಂಡಯ ಮೇಲೆ ಲತಾ ಅವರ ಮೊಬೈಲ್, ಚಪ್ಪಲಿ ಸಿಕ್ಕ ಹಿನ್ನೆಲೆಯಲ್ಲಿ ನಾಲೆಯಲ್ಲಿ ಶೋಧ ಆರಂಭಿಸಿದಾಗ ಆಕೆಯ ಶವ, ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದ ಕಣಿವೆ ಬಿಳಚಿ ಬಳಿ ನಾಲೆಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ಬಳಿಕ ಲತಾ ಶವವನ್ನ ಮೆಗ್ಗಾನ್ ಶವಾಗಾರಕ್ಕೆ ತಂದು ಭದ್ರಾವತಿ ತಹಸೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

ಇನ್ನು ಮಗಳ ಸಾವಿನಿಂದ ಶಾಕ್ ಒಳಗಾಗಿರುವ ಲತಾ ಕುಟುಂಬಸ್ಥರು, ಮೆಗ್ಗಾನ್ ಶವಾಗಾರದ ಬಳಿ ಲತಾ ಅವರ ಫೋಟೊ ಹಿಡಿದು, ಮಗಳಿಗೆ ಅನ್ಯಾಯ ಮಾಡಿದ ಪತಿ ಗುರುರಾಜ್ ಹಾಗೂ ಆತನ ಕುಟುಂಬಸ್ಥರ ವಿರುಧ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅದರಲ್ಲೂ ಲತಾ ಅವರ ತಾಯಿ, ಭದ್ರಾವತಿ ತಹಸೀಲ್ದಾರ್ ಮುಂದೆ ಕೈ ಮುಗಿದು, ಅಳುತ್ತಾ, ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿದ್ದದ್ದು, ಎಂತಹವರ ಮನಸ್ಸನ್ನು ಕಲಕುವಂತಿತ್ತು.

ಮಗಳು ಸಾಯುವ ಮುನ್ನವೇ ಡೆತ್ ನೋಟ್ ನಲ್ಲಿ ಎಲ್ಲವನ್ನ ಬರೆದಿಟ್ಟಿದ್ದು, ಅದನ್ನ ಪರಿಗಣಿಸಿ, ನ್ಯಾಯ ನೀಡುವಂತೆ ಮನವಿ ಮಾಡುತ್ತಿದ್ದರು. ಒಟ್ಟಾರೆ, ಹಣದ ದಾಹ, ಅಕ್ರಮ ಸಂಬಂಧ ಹಾಗೂ ಅಮಾನವೀಯ ನಡವಳಿಕೆಯ ಕುಟುಂಬದವರೊಂದಿಗೆ ಜೀವನ ನಡೆಸುವುದು ಅಸಾಧ್ಯ ಎಂದು ಭಾವಿಸಿ, ಬದುಕಿಗೆ ವಿದಾಯ ಹೇಳಿದ್ದು ಮಾತ್ರ ನಿಜಕ್ಕೂ ದುರಂತ.

ಡೆತ್‌ನೋಟ್‌ನಲ್ಲಿ ಏನಿದೆ? ವಾಟ್ಸಾಪ್ ಮೂಲಕ ಲತಾ ಸಂಬಂಧಿಕರಿಗೆ ಕಳುಹಿಸಿದ ಡೆತ್‌ನೋಟ್‌ನಲ್ಲಿ, ಯಾರು ಹುಟ್ಟುತ್ತ ಕೆಟ್ಟವರಾಗಿರುವುದಿಲ್ಲ. ಪ್ರತಿ ಹೆಣ್ಣು ಪುಣ್ಯ ಮಾಡಿ ಗಂಡನ ಮನೆಗೆ ಹೋಗುತ್ತಾಳೆ. ಹೊಸ ಮನೆಗೆ ಹೊಂದಿಕೊಳ್ಳಲು ಸಮಯ ಬೇಕು. ಆ ಸಮಯದಲ್ಲಿ ಮನೆಯ ಉಳಿದವರ ಜೊತೆ ಗಂಡನೂ ದ್ವೇಷಿಸಿದಾಗ ಹೆಣ್ಣು ಬದುಕಿದ್ದೂ ಸತ್ತಂತೆ. ನನ್ನ ಸಾವಿಗೆ ಗುರುರಾಜ್ ಹಾಗೂ ಆ ಐವರೇ ಕಾರಣ, ಅವರಿಗೆ ಶಿಕ್ಷೆಯಾಗಬೇಕು. ಓದುತ್ತಿರುವವರು ನನಗೆ ನ್ಯಾಯ ಕೊಡಿಸಿ ಅಂತಾ ವಾಟ್ಸಾಪ್​ನಲ್ಲಿ ಸಂದೇಶ ರವಾನಿಸಿದ್ದಾರೆ.

ಡೆತ್​ ನೋಟ್​ ಸಂದೇಶವನ್ನು ಸಂಬಂಧಿಕರಿಗೆ ಕಳುಹಿಸಿದ್ದ ಲತಾ ಆ ಬಳಿಕ ನಾಪತ್ತೆಯಾಗಿದ್ದರು. ಈ ವಿಷಯ ತಿಳಿಯುತ್ತಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿಗಳ ಜೊತೆಯಲ್ಲಿ ಲತಾಗಾಗಿ ಹುಡುಕಾಟ ನಡೆಸಿದ್ದರು.

Megha
the authorMegha

Leave a Reply

error: Content is protected !!