ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದ್ದು, ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳ ಜಾರಿಗೆ ನಿರ್ಣಯ ಕೈಗೊಂಡಿದೆ.
ಸೋಮವಾರ, ಜುಲೈ 15ರ ಸಂಜೆ ಸಿಎಂ ನೇತೃತ್ವದಲ್ಲಿ ನಡೆದ ಮೂರನೇ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಆಗಸ್ಟ್ 1 ರಿಂದ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ನಿರ್ಧರಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ಬಹುದಿನಗಳ ಮತ್ತು ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ.
ಈ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ಬಂದಿದ್ದು, “2024 ಆಗಸ್ಟ್ 1 ರಿಂದ 7 ನೇ ವೇತನ ಆಯೋಗ ಜಾರಿ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಶೇ 10.5 ವೇತನ ಪರಿಷ್ಕರಣೆ: ವೇತನ ಆಯೋಗವು ಶೇ.27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಶೇ.17ರ ಮಧ್ಯಂತರ ಪರಿಹಾರ ನೀಡಲಾಗಿದ್ದು, ಅಂತಿಮವಾಗಿ ಶೇ 10.5 ವೇತನ ಪರಿಷ್ಕರಣೆಯಾಗಲಿದೆ.
ಒತ್ತಡಕ್ಕೆ ಮಣಿದ ಸರ್ಕಾರ: ಸರ್ಕಾರಿ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳ ಜಾರಿಗೆ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಇತ್ತು. ಹೀಗಾಗಿ ಮೊದಲ ದಿನದ ಅಧಿವೇಶನದ ಬಳಿಕ ಸೋಮವಾರ ಸಂಜೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಇದಕ್ಕೆ ಎಲ್ಲ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಹು ವರ್ಷಗಳಿಂದ ಮುಂದೂಡುತ್ತಾ ಬಂದಿತ್ತು!: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದದೆ. ಹೀಗಾಗಿ ಸಂಪನ್ಮೂಲ ಕೊರತೆ ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಸಲಹೆಯಂತೆ 7ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯನ್ನು ಮುಂದೂಡುತ್ತಾ ಬಂದಿತ್ತು.
ಮುಷ್ಕರ ಎಚ್ಚರಿಕೆಗೆ ಬೆಚ್ಚಿದ ಸರ್ಕಾರ?: ಆದರೆ, 7 ನೇ ವೇತನ ಆಯೋಗ ಶಿಫಾರಸುಗಳನ್ನು ಬೇಡಿಕೆಗಾಗಿ ಜುಲೈ ಅಂತ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆಯನ್ನು ನೌಕರರ ಸಂಘಟನೆಗಳು ನೀಡಿದ್ದವು. ಇದರಿಂದ ಭಯಗೊಂಡ ಸರ್ಕಾರ ಜಾರಿಗೆ ದಿನಾಂಕ ಘೋಷಣೆ ಮಾಡಿದೆ.
ಪ್ರಮುಖ ಶಿಫಾರಸುಗಳೇನು?: 7 ನೇ ವೇತನ ಆಯೋಗವು ಶೇ.27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 7500 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ನಿರೀಕ್ಷೆಯಿದೆ. ಹೀಗಾಗಿ ಈಗಾಗಲೇ ಗ್ಯಾರಂಟಿಗಳಿಗೆ ವಾರ್ಷಿಕ ಹೆಚ್ಚುವರಿ 52,000 ಕೋಟಿಯಿಂದ 58,000 ಕೋಟಿ ರೂ. ಹೊರೆ ಕಾರಣಕ್ಕೆ ಸದ್ಯ ಆದಾಯ, ವೆಚ್ಚ ಸರಿದೂಗಿಸುವುದು ಕಷ್ಟವಾಗಿದೆ.
ಹೀಗಾಗಿ ಇನ್ನಷ್ಟು ಹೊರೆಗೆ ಕಾರಣವಾಗುವ 7ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ತಕರಾರು ತೆಗೆದಿತ್ತು. ಕಳೆದ ಜು.4 ರಂದು ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ಹಣಕಾಸು ಇಲಾಖೆ ಕಾರ್ಯದರ್ಶಿ ರಾಜ್ಯದ ಆರ್ಥಿಕ ಸ್ಥಿತಿಯ ವಾಸ್ತವ ವಿವರಣೆ ನೀಡಿದ್ದರು. ಇದರಿಂದ ವಿಚಲಿತಗೊಂಡ ಸರ್ಕಾರ ತೀರ್ಮಾನವನ್ನು ಮುಂದೂಡಿತ್ತು.
ಆದರೆ, ಇದರಿಂದ ಅಸಮಾಧಾನಗೊಂಡ ನೌಕರರು ತಾಳ್ಮೆಕಳೆದುಕೊಳ್ಳುವ ಹಂತ ತಲುಪುತ್ತಿರುವುದನ್ನು ಅರಿತ ಸರ್ಕಾರ ಸೋಮವಾರ ಸಿಹಿ ಸುದ್ದಿ ನೀಡುವ ಮೂಲಕ ನೌಕರರ ಸಹನೆಗೆ ಜೈ ಎಂದಿದೆ.