
- ಫೆಬ್ರವರಿ ತಿಂಗಳ ವೇತನ ಮಾರ್ಚ್ 1ರಂದೆ ಜಮಾ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖಿನಂದು ವೇತನ ಪಾತಿಸಲು ನಿಗಮದ ವ್ಯವಸ್ಥಾಪಕ ನಿರ್ದೇಕರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಫೆಬ್ರವರಿ ತಿಂಗಳ ವೇತನ ಮಾರ್ಚ್ 1ರಂದೆ ಎಲ್ಲ ನೌಕರರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಸಾರಿಗೆ ಸಚಿವರು ಹಾಗೂ ನಿಗಮದ ಅಧ್ಯಕ್ಷರ ಆದೇಶದಂತೆ ನಾವು ಎಲ್ಲ ನೌಕರರಿಗೂ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನ ಪಾತಿಸಲಿದ್ದು ಹೀಗಾಗಿ ಸರಿಯಾದ ಸಮಯಕ್ಕೆ ನೌಕರರ ಹಾಜರಾತಿ ನಿರ್ವಹಣೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಈವರೆಗೂ ಬಿಎಂಟಿಸಿಯಲ್ಲಿ ಎಲ್ಲ ವರ್ಗದ ನೌಕರರ/ಅಧಿಕಾರಿಗಳ ವೇತನವನ್ನು ನಿರ್ದೇಶನಗಳನ್ವಯ ನಿರ್ವಹಣೆ ಮಾಡಿ ಪ್ರತಿ ತಿಂಗಳ 7 ನೇ ತಾರೀಖಿನೊಳಗೆ ಪಾವತಿ ಮಾಡುವ ಪದ್ಧತಿ ಚಾಲ್ತಿಯಲ್ಲಿತ್ತು.
ಆದರೆ, ಫೆಬ್ರವರಿ-2025ರ ವೇತನದಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳೂ ಸಂಸ್ಥೆಯ ಎಲ್ಲ ವರ್ಗದ ನೌಕರರು/ಅಧಿಕಾರಿಗಳಿಗೆ 1 ನೇ ತಾರೀಖಿನಂದು ವೇತನ ಪಾವತಿ ಮಾಡಲು ಸಾರಿಗೆ ಹಾಗೂ ಮುಜರಾಯಿ ಸಚಿವರು ಹಾಗೂ ಅಧ್ಯಕ್ಷರು ಅನುಮೋದಿಸಿದ್ದಾರೆ. ಅದರಂತೆ…
1. ಪ್ರತಿ ತಿಂಗಳು 26 ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ಹಾಜರಾತಿಯನ್ನು ವಾಸ್ತವಿಕ ಹಾಜರಾತಿಗಳಿಗನುಗುಣವಾಗಿ ಮುಕ್ತಾಯಗೊಳಿಸಿ 1ನೇ ತಾರೀಖಿನಂದು ವೇತನ ಪಾವತಿಗೆ ಕ್ರಮ ವಹಿಸಬೇಕು.
2. ಫೆಬ್ರವರಿ-2025 ನೇ ಮಾಹೆಯ 26.02.2025 27.02.2025 ಹಾಗೂ 28.02.2025 ಈ 3 ದಿನಗಳಿಗೆ ಹಾಜರಾತಿ ನೀಡಿ ಪೂರ್ಣ ವೇತನ ಪಾವತಿ ಮಾಡಲು ಕ್ರಮ ವಹಿಸುವುದು.
3. ಈ ರೀತಿ ಪಾವತಿಸಿರುವ 03 ದಿನದ ವೇತನವನ್ನು ಕ್ರಮವಾಗಿ ಮಾರ್ಚ್-2025, ಏಪ್ರಿಲ್-2025 ಹಾಗೂ ಮೇ-2025 ನೇ ಮಾಹೆಯ ವೇತನದಲ್ಲಿ ಒಂದೊಂದು ದಿನದ ವೇತನವನ್ನು ಕಡಿತ ಮಾಡಿ ಸರಿದೂಗಿಸಿಕೊಳ್ಳುವುದು.
4. ನೌಕರರು/ಅಧಿಕಾರಿಗಳು ಸೇವಾ ವಿಮುಕ್ತಿಗೊಳ್ಳುವ ಮಾಹೆಯಲ್ಲಿ ಮಾಸಾಂತ್ಯದವರೆಗೆ ವೇತನ ಪಾವತಿಸುವುದು.
ಹೀಗೆ ಪ್ರತಿ ತಿಂಗಳು 26ನೇ ತಾರೀಖಿನಿಂದ ಮುಂದಿನ ಮಾಹೆಯ 25 ನೇ ತಾರೀಖಿನವರೆಗೆ ಹಾಜರಾತಿಯನ್ನು ವಾಸ್ತವಿಕವಾಗಿ ಮುಕ್ತಾಯಗೊಳಿಸುವುದು ಹಾಗೂ 1ನೇ ತಾರೀಖಿನಂದು ವೇತನ ಪಾವತಿ ಮಾಡುವ ನಿರ್ದೇಶನಗಳನ್ನು ಹೊರತುಪಡಿಸಿ ಉಳಿದ ವೇತನ ಬಿಲ್ಲಿನ ನಿರ್ವಹಣೆ ಹಾಗೂ ಸಂಬಂಧಪಟ್ಟವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ನಿರ್ದೇಶನಗಳು ಯಥಾವತ್ತಾಗಿರುತ್ತವೆ ಎಂದು ತಿಳಿಸಿದ್ದಾರೆ.
ಇನ್ನು ಯಾವುದೇ ಹಂತಗಳಲ್ಲಿ ಲೋಪದೋಷ ಹಾಗೂ ವಿಳಂಬಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯನ್ನು ವಹಿಸಿ ಸಂಬಂಧಪಟ್ಟವರು ಈ ಆದೇಶದಲ್ಲಿ ತಿಳಿಸಿರುವ ನಿರ್ದೇಶನಗಳನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಕಾರಿ/ಅಧೀಕ್ಷಕರು/ಮೇಲ್ವಿಚಾರಕರು/ಸಿಬ್ಬಂದಿಗಳ ಗಮನಕ್ಕೆ ತರಬೇಕು ಮತ್ತು ಈ ಸಂಬಂಧ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಲ್ಲಾ ಹಂತಗಳಲ್ಲಿ ಪರಿಪೂರ್ಣವಾಗಿ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಇನ್ನು ಈ ಆದೇಶವು ಫೆಬ್ರವರಿ-2025 ನೇ ಮಾಹೆಯಿಂದ ಜಾರಿಗೆ ಬರುತ್ತದೆ ಹಾಗೂ ಈ ಆದೇಶದ ಪ್ರತಿಯನ್ನು ಸ್ವೀಕರಿಸಿರುವುದಕ್ಕೆ ಮತ್ತು ಜಾರಿಗೊಳಿಸಿದ ಬಗ್ಗೆ ಅನುಸರಣಾ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್ ತಿಳಿಸಿದ್ದಾರೆ.