ಬನ್ನೂರು: ಪ್ರತಿ ವರ್ಷ ಏಕಕಾಲಕ್ಕೆ ನಡೆಯುವ ಏಳೂರಿನ ಮಾರಮ್ಮ ದೇವತೆಗಳ ಹಬ್ಬ ಮಂಗಳವಾರ (ಫೆ.27) ಮತ್ತು ಬುಧವಾರ (ಫೆ.28) ಆಯಾಯ ಗ್ರಾಮಗಳಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೀಡನಹಳ್ಳಿ, ಮಾಕನಹಳ್ಳಿ, ಬಸವನಹಳ್ಳಿ, ಬನ್ನೂರು, ಬೆಟ್ಟಹಳ್ಳಿ, ಚಾಮನಹಳ್ಳಿ ಮತ್ತು ಅತ್ತಹಳ್ಳಿಯ ಗ್ರಾಮಗಳಲ್ಲಿ ತಲಾತಲಾಂತರದಿಂದಲೂ ಏಕಕಾಲಕ್ಕೆ ಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷ ಫೆ. 27 ಮತ್ತು 28ರಂದು ಹಬ್ಬ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಮಂಗಳವಾರ ಆಯಾಯ ಗ್ರಾಮ ದೇವತೆ ಮಾರಮ್ಮನಿಗೆ ವಿಶೇಷ ಮೊದಲ ಪೂಜೆ (ತಂಪು ಸೇವೆ) ಕಾರ್ಯಕ್ರಮ ನೆರವೇರಿಸಲಾಯಿತು. ಈ ಹಿನ್ನೆಲೆಯಲ್ಲಿ ಗ್ರಾಮದ ಹೆಂಗಳೆಯರು ಬಿಂದಿಗೆಯಲ್ಲಿ ನೀರು ತುಂಬಿಸಿ (ಮೀಸಲು ನೀರು) ಗಂಗೆ ಪೂಜೆ ನೆರವೇರಿಸಿ ಮನೆಗೆ ತೆಗೆದುಕೊಂಡು ಹೋಗುವ ಸಂಭ್ರಮ ಮನೆ ಮಾಡಿತ್ತು.
ಬುಧವಾರ ಮುಂಜಾನೆ ಮಡೆಯನ್ನ: ಬೀಡನಹಳ್ಳಿಯಲ್ಲಿ ಉತ್ತನಹಳ್ಳಿ ಮಾರಮ್ಮನಿಗೆ ಗ್ರಾಮದ ಪ್ರತಿ ಮನೆಯಿಂದ ಒಬ್ಬರಂತೆ ಮುಂಜಾನೆ 4.30ರಿಂದಲೇ ಒಂದೆಡೆ ಸೇರಿ ಬೆಳಗ್ಗೆ 7.30ರವೆಗೂ ಮಡೆ ಊಯ್ಯುವರು. (ಹೊಸ ಮಡಿಕೆ, ತಂದು ಅದರಲ್ಲಿ ಅಕ್ಕಿ, ಬೇಳೆ, ಉಪ್ಪು ಅದಕ್ಕೆ ತಕ್ಕಷ್ಟು ನೀರು ಹಾಕಿ ಅನ್ನಮಾಡುವುದು) ನಂತರ ಮಡೆಮಡಿಕೆಯ ಬಾಯಿಯನ್ನು ಅಡಕೆಯ ಎಲೆ( ಒಡಾಳೆ)ಯಿಂದ ಮುಚ್ಚಿ ಅದನ್ನು ಒಡಾಳೆ ದಾರದಿಂದಲೇ ಕಟ್ಟಿದ್ದರು. ಈ ವೇಳೆ ಜವನ ಬೇವಿನ ಸೊಪ್ಪು ಕಟ್ಟುವ ಮೂಲಕ ಅಲಂಕರಿಸಿ ತಾವು ಮಡೆ ಊಯ್ಯಿದಿರುವ ಮಡಿಕೆಯನ್ನು ಗುರುತು ಹಾಕಿಕೊಂಡು ಬಂದಿದ್ದರು.
ಮತ್ತೆ ಮಧ್ಯಾಹ್ನನದ ನಂತರ ಗ್ರಾಮದ ಹೆಂಗಳೆಯರು ತಂಬಿಟ್ಟಿನಾರತಿ ಜತೆಗೆ ಹಣ್ಣು ಕಾಯಿ ಧೂಪ ಸಮೇತ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆ ಹೊತ್ತು ಬೀಡನಹಳ್ಳಿ ಗ್ರಾಮದ ರಾಜ ಬೀದಿಗಳ ಮೂಲಕ ಮೆರವಣಿಗೆ ಹೊರಟು ಮಡೆ ಊಯ್ಯಿದಿರುವ ಸ್ಥಳ ತಲುಪಿದರು.
ಮಡೆ ಬಳಿ ತಾವು ಮೆರವಣಿಗೆ ಮೂಲಕ ಹೊತ್ತು ತಂದಿದ್ದ ತಂಬಿಟ್ಟಿನಾರತಿ ಇಟ್ಟು ಹಣ್ಣು ಮುರಿದು, ಕಾಯಿ ಒಡೆದು ಗಂಧದಕಡ್ಡಿ ಹಚ್ಚಿ ಹೆಂಗಳೆಯರು ಭಕ್ತಿಭಾವದಿಂದ ಪೂಜೆ ನೆರವೇರಿಸಿದರು.
ಇದಕ್ಕೂ ಮುನ್ನಾ ಗ್ರಾಮದ ರಾಜ ಬೀದಿಯಲ್ಲಿ ಮೆರವಣಿಗೆ ಹೊರಟ ಪೂಜೆಗಳನ್ನು ಬನ್ನೂರು ಹೆಗ್ಗೆರೆಗೆ ತಂದು ಮತ್ತೆ ಹೂ ಹೊಂಬಾಳೆ ಮಾಡಿದ ಬಳಿಕ ಬೀಡನಹಳ್ಳಿ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳನ್ನು ಹೊತ್ತ ದೇವರ ಗುಡ್ಡಪ್ಪಂದಿರು ಮಡೆ ಸ್ಥಳ ತಲುಪಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.
ಬಳಿಕ ಮಡೆ ಮಡಿಕೆಗಳ ಮೇಲೆ ತೀರ್ಥ ಪ್ರೊಷಕ್ಷಣೆ ಮಾಡಿದರು. ಆ ನಂತರ ಮಡೆ ಮಡಿಕೆಗಳನ್ನು ಹೊತ್ತು ಮನೆಗಳಿಗಳತ್ತ ಗ್ರಾಮದ ಯುವಕರು ತೆರಳಿದರು. ಇನ್ನು ಮನೆ ಬಾಗಿಲ ಬಳಿ ಮಡೆ ಹೊತ್ತವರ ಪಾದಪೂಜೆಯನ್ನು ಅಂದರೆ ಗಂಗೆಯನ್ನೆರೆಯುವ ಮೂಲಕ ದೇವರ ಸ್ವರೂಪಿ ಎಂದು ಮಡೆಯನ್ನು ಮನೆಗೆ ಬರಮಾಡಿಕೊಂಡಿದರು.
ಆ ಬಳಿಕ ಬೇರೇಬೇರೆ ಗ್ರಾಮಗಳಿಂದ ಬಂದಿದ್ದ ಬಂಧು ಬಳಗದವರು ಹಾಗೂ ಸ್ನೇಹಿತರಿಗೆ ಮಾಸಾಹಾರ ಮಾಡಿ ಬಡಿಸುವ ಮೂಲಕ ಪೂರ್ಣಗೊಳಿಸಿದರು.
ಇನ್ನು ಈ ಬಾರಿ ಮಹಿಸಾ ಮರ್ಧಿನಿ ಪೌರಾಣಿಕ ನಾಟಕವನ್ನು ಗ್ರಾಮದ ಯುವಕರು ಆಡುವ ಮೂಲಕ ರಂಗ ಪ್ರಿಯಯ ಪ್ರೀತಿಗೆ ಪಾತ್ರರಾಗಿದ್ದು ವಿಶೇಷವಾಗಿತ್ತು. ಏಕೆಂದರೆ ಇತ್ತೀಚೆನ ದಿನಗಳಲ್ಲಿ ಹಳ್ಳಿಗಳಲ್ಲಿ ರಂಗ ಕಲೆ ನಶಿಸುವ ಹಂತ ತಲುಯಪಿದ್ದು, ಕಲಾವಿದರೆ ಹಣಹಾಕಿಕೊಂಡು ಅಭಿನಯಿಸಬೇಕಾಗಿರುವುದರಿಂದ ಯುವಕರು ಈ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಆದರೂ ಬೀಡನಹಳ್ಳಿಯಲ್ಲಿ ರಂಗಕಲೆ ಈಗಲೂ ಮಾನ್ಯತೆ ಇದೆ.