ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ದ್ವಾರಕೀಶ್ ವಿಧಿವಶರಾಗಿದ್ದಾರೆ.
ದ್ವಾರಕೀಶ್ ಅವರಿಗೆ ಆರೋಗ್ಯ ಸರಿಯಾಗಿರಲಿಲ್ಲ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಬೆಳಗಿನ ಜಾವ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಕನ್ನಡದ ಹಿರಿಯ ನಟ ದ್ವಾರಕೀಶ್ ಅವರಿಗೆ 81 ವಯಸ್ಸಾಗಿತ್ತು. ನಿರ್ದೇಶಕ, ನಿರ್ಮಾಪಕ, ನಟರಾಗಿ ಕೆಲಸ ಮಾಡಿದ ದ್ವರಕೀಶ್ ವಿಧಿವಶರಾಗಿದ್ದಾರೆ.
ಗುರು ಶಿಷ್ಯರು, ಆಪ್ತಮಿತ್ರ, ಭಾಗ್ಯವಂತರು ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ದ್ವಾರಕೀಶ್ ಅವರ ಸಾವಿನ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಟುತ್ತಿದ್ದವು.
ಸ್ಯಾಂಡಲ್‌ವುಡ್‌ನ ಹಿರಿಯ ನಟ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು. ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅವರನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿದೆ.
ನಟರಾಗಿ, ನಿರ್ದೇಶಕ, ನಿರ್ಮಾಪಕರಾಗಿ ಹಲವಾರು ಚಿತ್ರಗಳ ಕೊಡುಗೆ ನೀಡಿರುವ ಅವರು ಕನ್ನಡ ಚಿತ್ರರಂಗಕ್ಕೆ ಕಲಾಸೇವೆ ಸಲ್ಲಿಸಿದ್ದಾರೆ. ಡಾ. ವಿಷ್ಣುವರ್ಧನ್, ಡಾ. ರಾಜ್‌ಕುಮಾರ್ ಹಾಗೂ ಅಂಬರೀಶ್‌ರಂತಹ ಮೇರು ನಟರೊಂದಿಗೆ ಹಿರಿಯ ತೆರೆಯಲ್ಲಿ ಮಿಂಚಿರುವ ನಟ ದ್ವಾರಕೀಶ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರೋಬ್ಬರಿ 40ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ಅವರು ಕನ್ನಡ ಜನತೆಗೆ ಜನಪ್ರಿಯ ರಾಜಕುಳ್ಳ ಎಂದೇ ಜನಪ್ರಿಯರು.
ದ್ವಾರಕೀಶ್ ಆಗಸ್ಟ್ 19 -1942 ಹುಣಸೂರಿನಲ್ಲಿ ಶಮಾರಾವ್ ಮತ್ತು ಜಯಮ್ಮ ದಂಪತಿಗೆ ಜನಿಸಿದ್ದರು. ಮೈಸೂರಿನ ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ ಸಿಪಿಸಿ ಪಾಲಿಟೆಕ್ನಿಕ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದ್ದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದ್ದ ದ್ವಾರಕೀಶ್ 1963 ರಲ್ಲಿ ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡಿದ್ದರು.
ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ವಿಷ್ಣುವರ್ಧನ್ ಅವರ ಅನೇಕ ಸಿನಿಮಾದಲ್ಲಿ ಅವರು ತೆರೆ ಹಂಚಿಕೊಂಡಿದ್ದರು. ಇದರಲ್ಲಿ ʼಆಪ್ತಮಿತ್ರʼ ಸಿನಿಮಾದಲ್ಲಿನ ಇವರಿಬ್ಬರ ಅಭಿನಯ ಗಮನ ಸೆಳೆದಿತ್ತು.
ನಿರ್ಮಾಪಕರಾಗಿ: 1966ರಲ್ಲಿ ದ್ವಾರಕೀಶ್ ಅವರು ʼಮಮತೆಯ ಬಂಧನʼ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ಕಾಲಿಟ್ಟರು. ‘ದ್ವಾರಕೀಶ್ ಚಿತ್ರ’ ಬ್ಯಾನರ್ ಅಡಿಯಲ್ಲಿ ‘ಭಾಗ್ಯವಂತರು’, ʼಮೇಯರ್ ಮುತ್ತಣ್ಣʼ, ʼಕುಳ್ಳ ಏಜೆಂಟ್ ೦೦೦ʼ, ʼಕೌಬಾಯ್ ಕುಳ್ಳʼ, ʼಸಿಂಗಪೂರಿನಲ್ಲಿ ರಾಜಾ ಕುಳ್ಳʼ, ʼಪ್ರೀತಿ ಮಾಡು ತಮಾಷೆ ನೋಡುʼ ಹೀಗೆ ಸುಮಾರು 40 ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಿಸಿದ್ದರು.
ನಿರ್ದೇಶನ: 1985ರಲ್ಲಿ ʼಬಾರಿ ನೀ ಬರೆದ ಕಾದಂಬರಿʼ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು. ಆ ಬಳಿಕ ನಂತರʼ ಡಾನ್ಸ್ ರಾಜ ಡಾನ್ಸ್ʼ, ʼಶ್ರುತಿ ಹಾಕಿದ ಹೆಜ್ಜೆʼ, ʼರಾಯರು ಬಂದರು ಮಾವನ ಮನೆಗೆʼ, ‘ಮಜ್ನು’, ‘ಗಿಡ್ಡು ದಾದ’, ʼಕಿಡ್ನಾಪ್ʼ, ʼಕಿಲಾಡಿಗಳುʼ ಸೇರಿದಂತೆ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.
ನಟರಾಗಿ: ‘ಜನ್ಮರಹಸ್ಯ’, ‘ಮಂಕುತಿಮ್ಮ’, ‘ಪೆದ್ದ ಗೆದ್ದ’, ‘ಕಿಟ್ಟು ಪುಟ್ಟು’, ‘ಸಿಂಗಾಪುರದಲ್ಲಿ ರಾಜಾಕುಳ್ಳ’, ‘ಆಪ್ತಮಿತ್ರ’, ‘ಪ್ರಚಂಡ ಕುಳ್ಳ’, ‘ಗುರುಶಿಷ್ಯರು’, ‘ಆಟಗಾರ’, ‘ವಿಷ್ಣುವರ್ಧನ್’ ಹೀಗೆ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಅವರು ʼಚೌಕʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.