ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್
ಮೈಸೂರು: ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಕರ್ನಾಟಕದಲ್ಲಿ ಡಿ.6 ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ನವೆಂಬರ್ 26ರಿಂದ ದೇಶದ ರೈತರ ಹಿತಕ್ಕಾಗಿ ದೆಹಲಿಯಲ್ಲಿ ಉಪವಾಸ ನಡೆಸುತ್ತಿರುವು ಆರನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ನಡುವೆ ದಲೈವಾಲರ ಉಪವಾಸ ಬೆಂಬಲಿಸಿ ಕರ್ನಾಟಕದ ರೈತ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಚಳವಳಿ ನಿರತ ಮುಖಂಡರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ರೈತರನ್ನು ಉಳಿಸಬೇಕು. ನ.26ರಂದು ಉಪವಾಸ ಆರಂಭಕ್ಕೂ ಮೊದಲೇ ಧರಣಿ ನಿರತರನ್ನ ಬಂಧಿಸಿದ ಪಂಜಾಬ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಚಳವಳಿಗಾರರು. ಬಂಧನದಲ್ಲೂ ಉಪವಾಸ ನಡೆಸಿದ ಮುಖಂಡರ ವರ್ತನೆಗೆ ಮಣಿದ ಸರ್ಕಾರ ವಾಪಸ್ ಚಳವಳಿ ಜಾಗಕ್ಕೆ ಕರೆತಂದು ಬಿಡುಗಡೆ ಮಾಡಿದ್ದಾರೆ. ಇದು ರೈತ ಚಳವಳಿಯ ತಾಕತ್ತು ಎಂದರು.
ರಾಜ್ಯದಲ್ಲಿ ನಾಳೆಯಿಂದ ಅಂದರೆ ಡಿ.2ರಿಂದ ವಿಭಾಗ ಮಟ್ಟದಲ್ಲಿ ಬೆಳಗಾವಿ, ಬಿಜಾಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ರೈತ ಜಾಗೃತಿ ಸಭೆಗಳನ್ನು ನಡೆಸಲಾಗುತ್ತಿದೆ ರೈತರ ಜಾಗೃತಿ ಮೂಡಿಸಿ ರಾಜ್ಯದಲ್ಲಿಯೂ ಗಂಭೀರ ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ ಎಂದರು.
ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ರೈತ ಚಳುವಳಿಯ ಬಗ್ಗೆ ವರದಿ ನೀಡಲು ಸರ್ವೋಚ್ಚ ನ್ಯಾಯಾಲಯ ಸಮಿತಿಯನ್ನು ರಚಿಸಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿ ನವೆಂಬರ್ 22ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಆರಂಭಿಕ ವರದಿಯನ್ನು ನೀಡಿದೆ. ರೈತರ ಆತ್ಮಹತ್ಯೆ ಆಗುತ್ತಿರುವುದು ಸರಿಯಾದ ಮಾರುಕಟ್ಟೆ ಇಲ್ಲದೆ ಇರುವುದು. ಉತ್ಪಾದನೆ ವೆಚ್ಚಕ್ಕೆ ಬೆಂಬಲ ಬೆಲೆ ಕಡಿಮೆ ಇರುವುದು ಗಂಭೀರವಾಗಿದೆ. ಹೀಗಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಆದ್ದರಿಂದ ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ಮಾಡಲು ಕೇಂದ್ರಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವರದಿ ನೀಡಿದೆ.
ಈ ವರದಿ ನೀಡಿದ ಎರಡು ಮೂರು ದಿನದಲ್ಲಿ ಕೇಂದ್ರ ಸರ್ಕಾರ ರೈತ ಚಳವಳಿಯನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಸಂವಿಧಾನ ದಿನ ಆಚರಣೆ ಮಾಡುವ ಸರ್ಕಾರಕ್ಕೆ ಹಕ್ಕುಗಳಿಗಾಗಿ ಹೋರಾಟ ಮಾಡುವ ರೈತ ಮುಖಂಡರನ್ನು ಬಂಧನ ಮಾಡಿರುವುದು ಖಂಡನೀಯ. ಕೂಡಲೇ ಸಮಸ್ಯೆಗೆ ಕೇಂದ್ರ ಸರ್ಕಾರ ಮುಖಂಡರ ಜತೆ ಮಾತುಕತೆ ನಡೆಸಿ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಬಜೆಟ್ ನಲ್ಲಿ ರೈತರ ಸಾಲವನ್ನ 16% ಏರಿಕೆ ಮಾಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಬಜೆಟ್ ಘೋಷಣೆ ಮಾಡಿದರು. ಆದರೆ ಈಗ ನಬಾರ್ಡ್ ಮೂಲಕ ಸಹಕಾರ ಸಂಘಗಳಲ್ಲಿ ರೈತರಿಗೆ ಕೊಡುತ್ತಿದ್ದ ಬಡ್ಡಿ ರಹಿತ ಸಾಲ ಕಡಿವಾಣ ಹಾಕಲು ಶೇ.50ರಷ್ಟು ಅನುದಾನ ಕಡಿತ ಮಾಡಿದ್ದಾರೆ.ಇದು ರೈತರಿಗೆ ಸಹಕಾರ ಸಂಘಗಳಲ್ಲಿ ನೀಡುತ್ತಿದ್ದ ಬಡ್ಡಿ ರಹಿತ ಕೃಷಿ ಸಾಲ ತಪ್ಪಿಸುವ ಹುನ್ನಾರವಾಗಿ ರಾಜ್ಯದ ರೈತರಿಗೆ ಮರ್ಮಗಾತವಾಗಿದೆ. ರಾಜ್ಯದ ಎಲ್ಲ ಸಂಸದರು ರೈತರ ಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ಕಡಿತ ಮಾಡಿರುವ 50 ರಷ್ಟು ರಾಜ್ಯದ ಹಣವನ್ನು ಬಿಡುಗಡೆ ಮಾಡುವಂತೆ ನಿಯೋಗದ ಮೂಲಕ ಒತ್ತಾಯಿಸಲಾಗುತ್ತಿದೆ ಎಂದರು.
ಪ್ರೊ.ಮಹದೇವಯ್ಯ, ಮಹೇಶ್, ವಸಂತ್ ಕುಮಾರ್ ಮೈಸೂರು ಮಠ, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಮುಖಂಡರಾದ ಪಟೇಲ್ ಶಿವಮೂರ್ತಿ, ಸುಂದರಪ್ಪ, ಶಿವಸ್ವಾಮಿ, ತಾಲೂಕು ಅಧ್ಯಕ್ಷರಾದ ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ಕೋಟೆ ರಾಜೇಶ್, ದೇವನೂರು ವಿಜಯೇಂದ್ರ, ಸತೀಶ್, ಮುಖಂಡರಾದ ಪರಶಿವಮೂರ್ತಿ, ಕುರುಬೂರು ಪ್ರದೀಪ್, ಕಾಟೂರು ಮಹದೇವಸ್ವಾಮಿ, ಬನ್ನೂರು ಸೂರಿ, ಅಂಬಳೆ ಮಂಜುನಾಥ್, ಕಾಟೂರು ನಾಗೇಶ್, ಪ್ರಭುಸ್ವಾಮಿ, ಕೆಂಡಗಣ್ಣಪ್ಪ, ಸಾತಗಳ್ಳಿ ಬಸವರಾಜ್, ಕೋಟೆ ಸುನೀಲ್, ಪುಟ್ಟೇಗೌಡನಹುಂಡಿ ರಾಜು, ಉಮೇಶ್, ಎಂ.ಸ್ವಾಮಿ ಇನ್ನೂ ಮುಂತಾದವರು ಇದ್ದರು.