ಬೆಂಗಳೂರು: ರಾಜ್ಯದಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಬಾರಿ ಶೇ.81.15 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ಕೂಡ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ವರ್ಷ ಶೇ.74.67 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಇಂದು ಸುದ್ದಿಗೋಷ್ಠಿ ನಡೆಸಿದ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಫಲಿತಾಂಶ ಪ್ರಕಟಿಸಿದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 5,52,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಪೈಕಿ ಬಾಲಕಿಯರು 3,05,212 (84.87%) ಹಾಗೂ ಬಾಲಕರು 2,47,478 (76.98%) ಮಂದಿ ಪಾಸ್ ಆಗಿದ್ದಾರೆ. ಕಳೆದ ವರ್ಷಕ್ಕಿಂತ 6.48% ಹೆಚ್ಚಿನ ಫಲಿತಾಂಶ ಬಂದಿದೆ.
ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 97.37% ನೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದೆ. ಉಡುಪಿ – 96.80% ನೊಂದಿಗೆ ದ್ವಿತೀಯ, ವಿಜಯಪುರ – 94.89% ನೊಂದಿಗೆ ತೃತೀಯ ಸ್ಥಾನ ಪಡೆದಿದೆ. ಅದರಂತೆ ಈ ಬಾರಿ ಗದಗ ಜಿಲ್ಲೆ 72.86% ನೊಂದಿಗೆ ಕೊನೆ ಸ್ಥಾನದಲ್ಲಿದೆ.
ಜಯನಗರದ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೇಧಾ ಕಲಾ ವಿಭಾಗದಲ್ಲಿ 600ಕ್ಕೆ 596 ಅಂಕ ಪಡೆಯುವ ಮೂಲಕ ಕರ್ನಾಟಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ನೂತನ 600ಕ್ಕೆ 595 ಅಂಕ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಇನ್ನು ವಾಣಿಜ್ಯ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆಯುವ ಮೂಲಕ ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜಿನ ಜ್ಞಾನವಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯಾದ್ಯಂತ ಈ ಬಾರಿ 1,124 ಕೇಂದ್ರಗಳಲ್ಲಿ 6 ಲಕ್ಷ 98 ಸಾವಿರ 378 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇದ್ದು, ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆದಿದ್ದರು. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಇಲಾಖೆಯ ವೆಬ್‌ಸೈಟ್ https://karresults.nic.in/ ಭೇಟಿ ನೀಡಿ ಫಲಿತಾಂಶವನ್ನು ಬೆಳಗ್ಗೆ 11 ಗಂಟೆ ಬಳಿಕ ವೀಕ್ಷಿಸಬಹುದು.