- ನೌಕರರಿಗೆ ನ್ಯಾಯಯುತವಾಗಿ ವೇತನ ಹೆಚ್ಚಳ ಮಾಡದ ಸರ್ಕಾರ
- ಸಾಧನೆ ಬಿಂಬಿಸಿಕೊಳ್ಳಲು ಹೊರಟಿದೆ
- ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯದೇ?
ಮೈಸೂರು: ಮೈಸೂರು ದಸರಾದ ವೈಭವ ಹೆಚ್ಚಿಸಲು 58 ಸ್ತಬ್ಧಚಿತ್ರಗಳ ಅದ್ಧೂರಿ ಮೆರವಣಿಗೆಯೊಂದಿಗೆ ಆರಂಭವಾಗಿದೆ.
ಸ್ತಬ್ಧಚಿತ್ರಗಳು ಈ ಬಾರಿಯ ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದು, ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಸ್ತಬ್ಧಚಿತ್ರಗಳನ್ನು ವಿನ್ಯಾಸಗೊಳಿಸಲಾಗಿದೆ.
ಈ ವರ್ಷದ ಮೆರವಣಿಗೆಯಲ್ಲಿ ಪ್ರಮುಖವಾಗಿ ಸಾರಿಗೆ ನಿಗಮಗಳ ಮೂಲಕ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಸ್ತಬ್ಧಚಿತ್ರವು ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಒದಗಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರುವ ಈ ಯೋಜನೆಯ ಯಶಸ್ಸನ್ನು ಸ್ತಬ್ಧಚಿತ್ರವು ಪರಿಣಾಮಕಾರಿಯಾಗಿ ಪ್ರದರ್ಶಿಸುತ್ತಿದೆ.
ಈ ಯೋಜನೆ ಜಾರಿಯಾದ ನಂತರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದು ಹಾಗೂ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರದ ಉದ್ದೇಶ ಸಫಲವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದ್ದು, ಸರ್ಕಾರ ತಮ್ಮ ಸಾಧನೆಯನ್ನು ರಾಜ್ಯಕ್ಕೆ ತಲುಪಿಸುವ ಪ್ರಯತ್ನವನ್ನು ಈ ಸ್ತಬ್ಧಚಿತ್ರದ ಮೂಲಕ ಮಾಡುತ್ತಿದೆ.

ಆದರೆ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ನ್ಯಾಯಯುತವಾಗಿ ಕೊಡಬೇಕಿರುವ ವೇತನ ಹೆಚ್ಚಳವೂ ಇಲ್ಲ ಜತೆಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನೂ ಈವರೆಗೂ ಕೊಟ್ಟಿಲ್ಲ. ಇದೆಲ್ಲದರ ನಡುವೆ ಈ ದಸರಾ ಹಬ್ಬದಲ್ಲಿ ಕೊಡುತ್ತಿದ್ದ ಬೋನಾಸ್ (ಎಸ್ ಗ್ರೇಶಿಯಾ) ಕೂಡ ಇಲ್ಲವಾಗಿದೆ.
ಇದರಲ್ಲಿ ಬೋನಾಸ್ ಅನ್ನೋದನ್ನೇ ಈ ಸರ್ಕಾರಗಳು ನಿಲ್ಲಿಸಿಯೇ ಬಿಟ್ಟಿವೆ. ಈ ಬಗ್ಗೆ ಧ್ವನಿ ಎತ್ತಬೇಕಾದ ಸಂಘಟನೆಗಳು ಮೂಲೆ ಗುಂಪಾಗಿ ಕುಳಿತಿವೆ. ಈ ಎಲ್ಲದರ ನಡುವೆ ಸರ್ಕಾರ ನಾವು ದೊಡ್ಡ ಸಾಧನೆ ಮಾಡಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಶಕ್ತಿ ಯೋಜನೆ ಸ್ತಬ್ಧಚಿತ್ರವನ್ನು ಸಿದ್ಧಗೊಳಿಸಿದೆ. ಇದು ನೌಕರರ ಪಾಲಿಗೆ ಭಾರಿ ನೋವವಿನ ಸಂಗತಿ. ಕಾರಣ ಶಕ್ತಿ ಯೋಜನೆ ಯಶಸ್ಸಿನ ನೇರ ಭಾಗಿದಾರರಾದ ನೌಕರರಿಗೆ ಸರಿಯಾದ ವೇತನ ಕೊಡದೆ ಸರ್ಕಾರ ಉದ್ಧಟತನ ಮೆರೆಯುತ್ತಿರುವುದು.
ಈ ಸಂದರ್ಭದಲ್ಲಿ ಸರ್ಕಾರ ಬಿಂಬಿಸಿಕೊಳ್ಳಲು ಹೊರಟಿರುವ ಭಂಡತನವೂ ನಾಚಿಕೆಯಿಂದ ಕೂಡಿದೆ ಎಂದರೆ ಅದು ತಪ್ಪಾಗುವುದಿಲ್ಲ. ಇಂಥ ಸರ್ಕಾರ ಸಾರಿಗೆ ನೌಕರರ ಪಾಲಿನ ಮುಳ್ಳಾಗಿರುವುದು ಕಟು ಸತ್ಯ. ಇನ್ನಾದರೂ ಮಾನ ಮರ್ಯಾದೆ ಇದ್ದರೆ ಸರ್ಕಾರ ನೌಕರರಿಗೆ ಕೊಡಬೇಕಿರುವುದನ್ನು ಕೊಡುವುದಕ್ಕೆ ಮುಂದಾಗಲಿ.
Related
