ಶಿವಮೊಗ್ಗ: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನಿರ್ವಾಹಕರೊಬ್ಬರು ಬಸ್ಸಿನಲ್ಲಿಯೇ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದ ಹೊನ್ನಾಳಿ ಘಟಕದಲ್ಲಿ ಇಂದು ನಡೆದಿದೆ.
ಕರ್ತವ್ಯ ನಿರತ ಚಾಲಕ -ಕಂ-ನಿರ್ವಾಹಕ ಟಿ.ವಿ.ಬಸವರಾಜು (38) ಎಂಬುವರೆ ಇಂದು ಮಧ್ಯಾಹ್ನ 2 ಗಟೆ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆ ವಿವರ: ಹೊನ್ನಾಳಿ ಘಟಕದಲ್ಲಿ ಕೇವಲ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಘಟಕದಲ್ಲಿ ಕರ್ತವ್ಯ ನಿರತ ಮೆಕ್ಯಾನಿಕ್ ಕೆ.ರೇಣುಕಾ ಎಂಬುವರು ಬಸವರಾಜು ವಿರುದ್ಧ ತಗಾದೆ ತೆಗೆದು, ಈ ಸಂಬಂಧ ಶಿವಮೊಗ್ಗ ವಿಭಾಗದ ಅಧಿಕಾರಿಗಳ ಪ್ರಚೋದನೆಯಿಂದ ಚಾಲಕರಾದ ಬಸವರಾಜು ಹಾಗೂ ಸಿ.ಮಹೇಶ್ವರ ಅವರ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆಯಡಿ ಅಟ್ರಾಸಿಟಿ ಕೇಸ್ ದಾಖಲು ಮಾಡಲಾಗಿದೆ.
ಘಟಕದ ಆವರಣದಲ್ಲಿ ನಡೆದ ಗಲಾಟೆಯನ್ನು ನಿಗಮದ ಅಧಿಕಾರಿಗಳೇ ಬಗೆಹರಿಸಬಹುದಾಗಿತ್ತು. ಆದರೆ ಆ ವಿಷಯವನ್ನು ದೊಡ್ಡದು ಮಾಡಿ ಅಧಿಕಾರಿಗಳ ಬ್ಯಾಕ್ ಸಫೋರ್ಟ್‌ನಿಂದ ಇವರಿಬ್ಬರ ಮೇಲೆ ಅಟ್ರಾಸಿಟಿ ಕೇಸ್ ದಾಖಲು ಮಾಡಿ, FIR ದಾಖಲು ಮಾಡಿ ಅವರಿಗೆ ಜೈಲಿಗೆ ಹೋಗುವಂತೆ ಹುನ್ನಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಮಹಿಳಾ ಸಿಬ್ಬಂದಿಯನ್ನು ಮುಂದೆ ಇಟ್ಟುಕೊಂಡು ಮಾರ್ಚ್ 4ರಂದು ನೀರು ಹಿಡಿದುಕೊಳ್ಳುವ ಸಂಬಂಧ ಈ ರೀತಿ ಸುಖಸುಮ್ಮನೇ ಗಲಾಟೆ ಮಾಡಿಸಿ ಬಳಿಕ ಸುಳ್ಳು ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂಬ ಬಗ್ಗೆ ಇಂದು (ಮಾ.23-2024) ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಅವರ ಬಳಿ ಅಳಲನ್ನು ತೋಡಿಕೊಂಡಿದ್ದಾರೆ.
ಆದರೆ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಚಾಲಕರಾದ ಬಸವರಾಜು ಅವರಿಗೆ ಸ್ಪಂದಿಸದ ಕಾರಣ ಮನನೊಂದು ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಶಿವಮೊಗ್ಗ ವಿಭಾಗದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸಿನಲ್ಲಿಯೇ ವಿಷ ಸೇವಿಸಿ ಅತ್ಮಹತ್ಯೆ ಯತ್ನಿಸಿದ್ದಾರೆ.
ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಾಲಕ ಬಸವರಾಜು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆದರೂ ಈವರೆಗೂ ಯಾವುದೇ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ವಿಭಾಗದ ಚಾಲನಾ ಸಿಬ್ಬಂದಿ ಕಿಡಿಕಾರುತ್ತಿದ್ದಾರೆ.
ಇನ್ನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುವ ಮುನ್ನ ಚಾಲಕ ಬಸವರಾಜು ಶಿವಮೊಗ್ಗ ವಿಭಾಗದ ಅಧಿಕಾರಿಗಳಾಧ ವಿಜಯಕುಮಾರ್, ದೀನೇಶ್ ಕುಮಾರ್ ಚೆನ್ನಗಿರಿ, ಡಿಪೋ ವ್ಯವಸ್ಥಾಪಕ ಮಹೇಶ್ವರಪ್ಪ ಕೆ. ಹಾಗೂ ಮೆಕ್ಯಾನಿಕ್ ಕೆ.ರೇಣುಕಾ ಇವರೇ ನನ್ನ ಸಾವಿಗೆ ಕಾರಣ ಎಂದು ಪತ್ರವೊಂದನ್ನು ಬರೆದಿಟ್ಟಿದ್ದಾರೆ.
ಇನ್ನು ಶಿವಮೊಗ್ಗ ವಿಭಾಗದಲ್ಲಿ ಈ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ದೀನೇಶ್ ಕುಮಾರ್ ಚೆನ್ನಗಿರಿ ಅವರ ವಿರುದ್ಧ ಹಲವಾರು ದೂರುಗಳು ಕೇಳಿ ಬಂದಿದ್ದರೂ ಕೂಡ ಮೇಲಧಿಕಾರಿಗಳು ಈವರೆಗೂ ಯಾವುದೇ ಕ್ರಮ ಜರುಗಿಸದ ಕಾರಣ ನೌಕರರಿಗೆ ಕಿರುಕುಳ ಕೊಡುವುದನ್ನು ಮುಂದುವರಿಸಿರುವುದರಿಂದ ಇಂದು ನಿಗಮದ ನೌಕರನೊಬ್ಬ ವಿಷ ಸೇವಿಸಿ ಸಾವು ಬದುಕಿನ ನಡುವೆ ಹೋರಾಟಡುವ ಸ್ಥಿತಿ ಬಂದಿದೆ. ಈ ಬಗ್ಗೆ ಇನ್ನಾದರೂ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಈ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.