NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಶಕ್ತಿ ಯೋಜನೆಯ 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಸಾರಿಗೆ ನಿಗಮಗಳಿಗೆ ಇನ್ನೂ ಕೊಟ್ಟಿಲ್ಲ ಸಿದ್ದರಾಮಯ್ಯ ಸರ್ಕಾರ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ಪಕ್ಷವು ಚುನಾವಣಾ ಸಮಯದಲ್ಲಿ ಆಶ್ವಾಸನೆ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ 2025ರ ನವೆಂಬರ್ 25 ರವರೆಗೆ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಸರ್ಕಾರವು 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಒಟ್ಟಾರೆ 4,006.47 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಇದರ ಪರಿಣಾಮವಾಗಿ ಸಾರಿಗೆ ಸಂಸ್ಥೆಗಳು ಗಂಭೀರ ನಷ್ಟದ ಹಾದಿಗೆ ತಳ್ಳಲ್ಪಟ್ಟಿವೆ.

ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೆ ಸರಿ ಸುಮಾರು 650 ಕೋಟಿ ಟಿಕೆಟ್ ವಿತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರ್ಜರಿ ಪ್ರಚಾರವನ್ನೂ ಮಾಡಿದ್ದರು. ಆ ವೇಳೆ ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿಲ್ಲ, ಲಾಭದಲ್ಲಿವೆ ಎಂದು ಹೇಳಿದ್ದರು.

ಆದರೆ, ವಾಸ್ತವದಲ್ಲಿ ಶಕ್ತಿ ಯೋಜನೆಯ ಬಾಕಿ ಹಣದಿಂದ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸರ್ಕಾರ ನೀಡಿರುವ ಅಧಿಕೃತ ಅಂಕಿ-ಅಂಶಗಳೇ ಸ್ಪಷ್ಟ ಸಾಕ್ಷಿಯಾಗಿವೆ.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಈಗಾಗಲೇ ಸತತವಾಗಿ ಭಾರೀ ನಷ್ಟವನ್ನು ಅನುಭವಿಸುತ್ತಿದ್ದು, ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ಸರ್ಕಾರದಿಂದ ಹಣ ಪಾವತಿ ಸರಿಯಾಗಿ ಆಗದೇ ನಷ್ಟ ಇನ್ನಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರವು ಸಾರಿಗೆ ನಿಗಮಗಳನ್ನು ನಷ್ಟದ ಸುಳಿಯಿಂದ ಹೊರತರುವ ಬದಲು, ಅವುಗಳನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ ಎಂಬುವುದನ್ನು ಈ ಅಂಕಿಅಂಶಗಳೇ ಒತ್ತಿಒತ್ತಿ ಹೇಳುತ್ತಿವೆ.

ಇದೆಲ್ಲವನ್ನು ಗಮನಿಸಿದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಸಾರಿಗೆ ನಿಗಮಗಳನ್ನು ಸಂಪೂರ್ಣವಾಗಿ ನಷ್ಟದಿಂದ ಮೇಲಕ್ಕೆತ್ತಲು ವಿಫಲವಾಗಿದ್ದು, ಅವುಗಳ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಿರುವುದು ಸ್ಪಷ್ಟವಾಗಿದೆ. ಇನ್ನು ಇದು ಶಕ್ತಿ ಯೋಜನೆಯ ಮೊತ್ತವಾದರೆ ಇನ್ನು ಇತರೆ ಹಿರಿಯ ನಾಗರಿಕರು ವಿಕಲಚೇತನರು, ವಿದ್ಯಾರ್ಥಿಗಳು, ಯೋಧರು ಹೀಗೆ ಎಲ್ಲ ವಿನಾಯಿತಿ ಮೊತ್ತವು ನಿಗಮಗಳಿಗೆ ಸಮರ್ಪಕವಾಗಿ ಸರ್ಕಾರ ಕೊಡುತ್ತಿಲ್ಲ. ಇದರಿಂದ ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Megha
the authorMegha

Leave a Reply

error: Content is protected !!