NEWSನಮ್ಮಜಿಲ್ಲೆಬೆಂಗಳೂರು

ಗುಣಮಟ್ಟ ಕಾಪಾಡಿಕೊಂಡು, ರಸ್ತೆ ಕಾಮಗಾರಿ ಚುರುಕುಗೊಳಿಸಿ: ಲೋಖಂಡೆ ಸ್ನೇಹಲ್ ಸುಧಾಕರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ ಮೇಲ್ಮೈ ಪುನರ್ ನಿರ್ಮಾಣ, ರಸ್ತೆ ಗುಂಡಿ ದುರಸ್ತಿ, ಮಳೆ ನೀರು ಕಾಲುವೆ ತಡೆಗೋಡೆ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಳನ್ನು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಇಂದು ಸ್ಥಳ ಪರಿಶೀಲನೆ ನಡೆಸಿದರು.

ಹಗದೂರು ಮತ್ತು ನಾಗಗೊಂಡನಹಳ್ಳಿ ರಸ್ತೆ ಮೇಲ್ಮೈ ಪುನರ್ ನಿರ್ಮಾಣ ಕಾಮಗಾರಿ ಪರಿಶೀಲನೆ. ವೈಟ್ ಫೀಲ್ಡ್ ಉಪವಿಭಾಗ ವ್ಯಾಪ್ತಿಯ ಹಗದೂರು ಮತ್ತು ನಾಗಗೊಂಡನಹಳ್ಳಿ ರಸ್ತೆ ಮೇಲ್ಮೈ ಪುನರ್ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಾಮಗಾರಿಯ ಗುಣಮಟ್ಟವನ್ನು ಅಪರ ಆಯುಕ್ತರು ಪರಿಶೀಲಿಸಿದರು.

ಹಗದೂರು ಪ್ರದೇಶ ವ್ಯಾಪ್ತಿಯ ಮಳೆ ನೀರು ಕಾಲುವೆ ತಡೆಗೋಡೆ ಕಾಮಗಾರಿಯನ್ನು ಪರಿಶೀಲಿಸಿ, ಮಳೆಗಾಲದಲ್ಲಿ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಸೂಕ್ತ ಇಳಿಜಾರು ವ್ಯವಸ್ಥೆಯೊಂದಿಗೆ ಕಾಮಗಾರಿ ಚುರುಕುಗೊಳಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಲ್ಲೂರುಹಳ್ಳಿ, ಸಿದ್ದಾಪುರ ರಸ್ತೆ ಹಾಗೂ ವರ್ತೂರು – ಗುಂಜೂರು ರಸ್ತೆಗಳಲ್ಲಿ ರಸ್ತೆ ಗುಂಡಿ ಮುಚ್ಚಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು, ಬಾಕಿ ಉಳಿದ ರಸ್ತೆ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚುವ ಮೂಲಕ ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನಲ್ಲೂರಹಳ್ಳಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನದ ಕಾಮಗಾರಿಯನ್ನು ಪರಿಶೀಲಿಸಿದ ಅಪರ ಆಯುಕ್ತರು ಶೀಘ್ರದಲ್ಲಿ ಕಟ್ಟಡದ ಮೊದಲನೇ ಮಹಡಿ ಮೇಲ್ಛಾವಣಿಯನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪರಿಶೀಲನೆಯ ಸಂದರ್ಭದಲ್ಲಿ ನಗರದ ರಸ್ತೆ ಮತ್ತು ಮೂಲಸೌಕರ್ಯ ಕಾಮಗಾರಿಗಳು ಜನಜೀವನದ ಗುಣಮಟ್ಟವನ್ನು ನೇರವಾಗಿ ಪ್ರಭಾವಿಸುತ್ತವೆ. ಯಾವುದೇ ಕೆಲಸದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಕಾಮಗಾರಿಗಳ ಗುಣಮಟ್ಟದ ಕುರಿತು ತೀವ್ರ ಗಮನ ಹರಿಸಿ, ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬ ತೋರಿದರೆ ಸಂಬಂಧಿತ ಇಂಜಿನಿಯರ್‌ ಗಳೇ ನೇರ ಜವಾಬ್ದಾರರಾಗಿರುತ್ತೀರಿ ಎಂದು ಎಚ್ಚರಿಸಿದರು. ಎಲ್ಲಾ ಬಾಕಿ ಉಳಿದ ರಸ್ತೆ ಗುಂಡಿ ದುರಸ್ತಿ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ಬಿ.ಎನ್.ರಾಘವೇಂದ್ರ , ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗುರುರಾಜನ್ ಮತ್ತು ರವಿಕುಮಾರ್, ಬೆಂ.ಘ.ತ್ಯಾ.ನಿ ದ ಎ.ಜಿ.ಎಂ ಜ್ಯೋತಿ ಚೌಳ್ಕರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!