ಶ್ರೀರಂಗಪಟ್ಟಣ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂಸಿಎ ಪದವೀಧರೆಯೊಬ್ಬರು ಕಾವೇರಿ ನದಿಗೆ ಹಾರಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಬಳಿ ಜರುಗಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಪ್ರಸಾದಹಳ್ಳಿಯ ನಿವಾಸಿ ಮಂಜುನಾಥ್ ಎಂಬುವರ ಪುತ್ರಿ ಸಿಂಚನಾ (24) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಆಕೆಯ ಸುಳಿವು ಇನ್ನು ಸಿಕ್ಕಿಲ್ಲ.
ಸಿಂಚನಾ ಎಂಸಿಎ ಪದವೀಧರೆಯಾಗಿದ್ದು, ಕೆಲ ವರ್ಷಗಳಿಂದೀಚೆಗೆ ಪಿಸಿಒಡಿ (PCOD) ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಾಗಾಗಿದ್ದರು ಎಂದು ಪೋಷಕರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಏಕಾಏಕಿ ಮನೆಯಿಂದ ಹೊರಟು ಹಾಸನ ಮೂಲಕ ಚನ್ನರಾಯಪಟ್ಟಣ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಬಸ್ಸಿನಲ್ಲಿ ಬಂದಿದ್ದಾರೆ. ಬಸ್ ನಿಲ್ದಾಣಕ್ಕೆ ರಾತ್ರಿ 8ರ ಸಮಯದಲ್ಲಿ ಬಂದಿಳಿದ ಆಕೆ ಮಂಡ್ಯ ಕಡೆಗೆ ನಡೆದುಕೊಂಡು ಬಂದು ಉತ್ತರ ಕಾವೇರಿಯ ಸೇತುವೆ ಮೇಲಿಂದ ಉಕ್ಕಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿದ್ದಾರೆ.
ಅದನ್ನು ಗಮನಿಸಿದ ಸ್ಥಳೀಯ ದಾರಿಹೋಕ ವಾಹನ ಸವಾರರು ತಕ್ಷಣ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇನ್ನು ಘಟನಾ ಸ್ಥಳ ಸೇರಿದಂತೆ ನದಿ ತೀರದ 1 ಕಿಮಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಬೈಲ್ ಬೆಳಕಿನಲ್ಲೇ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಆದರೆ ಆಕೆ ಸುಳಿವು ಸಿಕ್ಕಿಲ್ಲ. ಈ ನಡುವೆ ಸಂಪೂರ್ಣ ಕತ್ತಲಾಗಿದ್ದ ಕಾರಣ ಹರಿಯುವ ಕಾವೇರಿಯ ಪ್ರವಾಹದಿಂದ ಸದ್ಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು (ಬುಧವಾರ) ಮುಂಜಾನೆಯಿಂದಲೇ ಹುಡುಕಾಟ ಆರಂಭಿಸಿದ್ದಾರೆ.

ಇತ್ತ ಸ್ಥಳದಲ್ಲಿ ಸಿಕ್ಕ ಬ್ಯಾಗ್, ಆಧಾರ್ ಕಾಡ್೯ ಹಾಗೂ ಚಪ್ಪಲಿಗಳ ಆಧಾರದ ಮೇಲೆ ಈಕೆಯೇ ನದಿಗೆ ಹಾರಿದ್ದಾಳೆ ಎಂಬ ಶಂಖೆ ವ್ಯಕ್ತಪಡಿಸಿದ ಪೊಲೀಸರು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
Related
